ಬೆಂಗಳೂರು : ಭವಿಷ್ಯದ ಆತಂಕಕ್ಕೆ ಒಳಗಾದ ತಂದೆಯೊಬ್ಬ ಅಂಧ ಹಾಗೂ ಮೂಕ ಮಗನನ್ನು ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಸಂಪಗಿರಾಮನಗರದಲ್ಲಿ ನಡೆದಿದೆ. ಮೃತರನ್ನು ಸಂಪಂಗಿರಾಮ ನಗರದ 3ನೇ ಅಡ್ಡರಸ್ತೆ ನಿವಾಸಿ ಸುರೇಶ್ (40) ಹಾಗೂ ಅವರ ಪುತ್ರ ಉದಯ್ ಸಾಯಿರಾಮ್ (10) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆಯ ಅರಸೀಕರೆಯ ಸುರೇಶ್ 15 ವರ್ಷಗಳ ಹಿಂದೆ ಲಕ್ಷ್ಮಿ ಅನ್ನುವವರನ್ನು ವಿವಾಹವಾಗಿದ್ದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಇವರಿಗೆ ಸಾಯಿರಾಮ್ ಹುಟ್ಟಿದ್ದ. ಹುಟ್ಟಿನಿಂದಲೂ ಬಾಲಕನಿಗೆ ಮಾತು ಬರುತ್ತಿರಲಿಲ್ಲ, ಕಣ್ಣು ಕಾಣಿಸುತ್ತಿರಲಿಲ್ಲ. ಈ ನಡುವೆ ಬೆನ್ನು ಹುರಿ ಸಮಸ್ಯೆಗೆ ತುತ್ತಾಗಿದ್ದ ಸುರೇಶ್ ಚಿಕಿತ್ಸಾ ವೆಚ್ಚ ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.
ತಮ್ಮ ಅನಾರೋಗ್ಯ ಹಾಗೂ ಅಂಗವಿಕಲ ಮಗನ ಸಂಕಷ್ಟದಿಂದ ನೊಂದುಕೊಂಡಿದ್ದ ಸುರೇಶ್ ಪತ್ನಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ವೇಳೆ ಎದ್ದು, ನಿದ್ರೆಯಲ್ಲಿದ್ದ ಮಗುವನ್ನು ನೀರಿನ ಸಂಪ್ ಗೆ ಎಸೆದು, ಬಳಿಕ ಶೇಷಾದ್ರಿಪುರನ ರೈಲ್ವೆ ಹಳಿ ಸಮೀಪ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿದ್ದೆಯಿಂದ ಎಚ್ಚರಗೊಂಡ ಲಕ್ಷ್ಮಿ ನೋಡಿದಾಗ ಮಗ ಹಾಗೂ ಪತಿ ನಾಪತ್ತೆಯಾಗಿದ್ದರು. ಅಕ್ಕಪಕ್ಕದವರನ್ನು ಕರೆದು ಹುಡುಕಾಡಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ನೀರಿನ ಸಂಪ್ ಬಾಗಿಲು ತೆಗೆದ್ರೆ ಮಗುವಿನ ಶವ ತೇಲುತ್ತಿತ್ತು. ಸುರೇಶ್ ಮೊಬೈಲ್ ಗೆ ಕರೆ ಮಾಡಿದ್ರೆ ಉತ್ತರಿಸುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಬಂದಿದೆ.
ಚಿನ್ನ ವ್ಯಾಪಾರದಲ್ಲಿ ನಷ್ಟ : ಮತ್ತೊಂದು ಚಿನ್ನದಂಗಡಿಗೆ ಕನ್ನ ಹಾಕಿಸಿದ್ದ ವ್ಯಾಪಾರಿಗಳು ಅಂದರ್…!
ಬೆಂಗಳೂರು : ವ್ಯಾಪಾರದಲ್ಲಿ ಸಂಭವಿಸಿದ್ದ ಕೋಟಿ ಕೋಟಿ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ಕನ್ನ ಹಾಕಿಸುವ ದಂಧೆಗೆ ಇಳಿದ ವ್ಯಾಪಾರಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಸ್ಥಾನ ಮೂಲದ ದೇವರಾಮ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿನ್ನಾಭರಣದ ಅಂಗಡಿ ಹೊಂದಿದ್ರೆ, ಜಿಗಣಿ ಸಮೀಪದ ಯರೇಂಬಡನಬಳ್ಳಿಯಲ್ಲಿ ಡವರ್ ಲಾಲ್ ಸ್ಟೀಲ್ ಅಂಗಡಿ ಹೊಂದಿದ್ದ. ಕಾಕತಾಳೀಯ ಅನ್ನುವಂತೆ ಇಬ್ಬರೂ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡಿದ್ದರು. ಹೀಗಾಗಿ ಕೋಟಿ ಕೋಟಿ ಸಾಲದ ಸುಳಿಗೆ ಸಿಲುಕಿದ್ದರು. ಸಾಲದ ಸುಳಿಯಿಂದ ಹೊರಬರಲು ಚಿನ್ನಾಭರಣ ಮಾರಾಟ ಮಳಿಗೆಯ ದರೋಡೆಗೆ ನೀಲನಕ್ಷೆ ಸಿದ್ದಪಡಿಸಿದ್ದರು.
ಇವರಿಬ್ಬರ ಪ್ಲಾನ್ ಗೆ ಮೋಂಬತ್ತಿ ತಯಾರಿಕ ಘಟಕವೊಂದರ ಮಾಲೀಕ ಸುನಿಲ್ ಮತ್ತು ನಗರ್ತಪೇಟೆಯ ಮತ್ತೊಬ್ಬ ವ್ಯಾಪಾರಿ ಧೀರಜ್ ನೆರವು ನೀಡಿದ್ದರು. ಹೀಗೆ 5 ಜನ ಜೊತೆ ಸೇರಿ ರಾಜಸ್ಥಾನದ ಕ್ರಿಮಿನಲ್ ಗಳಾದ ಸುಗುಣ ಮತ್ತು ರವೀಂದ್ರಪಾಲ್ ರನ್ನು ಸಂಪರ್ಕಿಸಿದ್ದಾರೆ. ಸಪ್ಟಂಬರ್ ನಲ್ಲಿ ನಗರಕ್ಕೆ ಬಂದ ಅವರಿಗೆ ದೇವರಾಮ್ ಮತ್ತು ಸುನಿಲ್ ಆಶ್ರಯ ಕಲ್ಪಿಸಿದ್ದರು.
ನಂತರ ಬೆಂಗಳೂರು ಹೊರವಲಯದಲ್ಲಿ ಸುತ್ತಾಟ ನಡೆಸಿದ್ದ ಇವರು ಭದ್ರತೆ ಇಲ್ಲದ ಚಿನ್ನಾಭರಣ ಮಳಿಗೆಯ ಪತ್ತೆ ಕಾರ್ಯ ನಡೆಸಿ, ಬೊಮ್ಮಹಳ್ಳಿಯಲ್ಲಿ ಒಂದು ಚಿನ್ನಾಭರಣ ಅಂಗಡಿ ಹಾಗೂ ಬಟ್ಟೆ ಅಂಗಡಿ ಉಳಿದಂತೆ ಚಂದಾಪುರ ಮತ್ತು ನಗರ್ತಪೇಟೆಯಲ್ಲಿ ಮೂರು ಚಿನ್ನಾಭರಣ ಅಂಗಡಿ ದೋಚಲು ನಿರ್ಧರಿಸಿದ್ದರು. ಅದರಂತೆ ಚಿಕ್ಕಪೇಟೆಯ ಮಕ್ಕಳ ಸ್ಟ್ರೀಟ್ ನಲ್ಲಿದ್ದ ಮಹರಾಷ್ಟ್ರ ಮೂಲದ ಗಣೇಶ್ ಪವಾರ್ ಅಂಗಡಿಯನ್ನು ಅಕ್ಟೋಬರ್ 10ರಂದು ದರೋಡೆ ಮಾಡಿದ್ದರು. ಗ್ಯಾಸ್ ಕಟ್ಟರ್ ಬಳಸಿ ಶೆಟರ್ ಮುರಿದ ಖದೀಮರು 750 ಗ್ರಾಮ್ ಚಿನ್ನದ ಗಟ್ಟಿ, 7.5 ಲಕ್ಷ ರೂಪಾಯಿ ನಗದು ಹಾಗೂ 1 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದರು.
ಗಣೇಶ್ ಕಾರ್ಪ್ ಕಳ್ಳತನ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ ವೇಳೆ ಮಹತ್ವದ ಮಾಹಿತಿಗಳು ಸಿಗಲಿಲ್ಲ. ಹೀಗಾಗಿ ಇದೊಂದು ಕಠಿಣ ಪ್ರಕರಣವಾಗಿ ಪರಿಣಮಿಸಿತ್ತು. ಹಾಗಿದ್ದರೂ ಪಟ್ಟು ಬಿಡದ ಪೊಲೀಸರು ತಾಂತ್ರಿಕ ಮಾಹಿತಿಗಳ ಮೊರೆ ಹೋಗಿ ಮೊಬೈಲ್ ಮತ್ತು ಸಿಸಿಟಿವಿಗಳ ಬೆನ್ನು ಹತ್ತಿದರು.
ಅದರಂತೆ ಕೃತ್ಯ ನಡೆದ ಬಳಿಕ ನಗರ್ತಪೇಟೆ, ಹಲಸೂರು ಗೇಟ್ ಮತ್ತು ಸಿಟಿ ಮಾರುಕಟ್ಟೆಯ ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ಸುನಿಲ್ ಕಾರು ಓಡಾಟದ ದೃಶ್ಯಗಳ ಮೇಲೆ ಅನುಮಾನ ಬಂದಿದೆ. ಹೀಗಾಗಿ ಅದೇ ಪ್ರದೇಶದ ಮೊಬೈಲ್ ಕರೆಗಳ ಮಾಹಿತಿ ತೆಗೆದ್ರೆ ಸುನಿಲ್ ಜೊತೆಗೆ ದೇವರಾಮ್, ಡವರ್ ಲಾಲ್ ಸಂಪರ್ಕ ಸಿಕ್ಕಿದೆ. ಹೀಗಾಗಿ ಸುನಿಲ್ ನನ್ನು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಹೊರಬಿದ್ದಿದೆ.
ಆದರೆ ಅಷ್ಟು ಹೊತ್ತಿಗೆ ಸುಗುಣ, ವಿನೋದ್, ರವೀಂದ್ರನಾಥ್ ರಾಜಸ್ಥಾನ ಸೇರಿದ್ದರು. ಉಳಿದವರು ಚಂದಾಪುರದ ಅಂಗಡಿ ದೋಚುವ ಸಲುವಾಗಿ ನಗರದಲ್ಲೇ ಉಳಿದುಕೊಂಡಿದ್ದರು. ಹೀಗಾಗಿ ಇದೀಗ ದೇವರಾಮ್, ಡವರ್ ಲಾಲ್, ಸುನಿಲ್ ಮತ್ತು ದರೋಡೆ ತಂಡದ ಧೀರಜ್,ದಿನೇಶ್,ರಾಜೇಂದ್ರ, ಅಶೋಕ್ ಕುಮಾರ್, ಗೋವರ್ಧನ್ ಸಿಂಗ್ ಮತ್ತು ಶ್ರೀರಾಮ್ ನನ್ನು ಬಂಧಿಸಲಾಗಿದೆ. ಬಂಧಿತರಿಂದ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
Discussion about this post