ತನಿಖೆ ಲೋಪವಾಗದಿರಲಿ ಅಧಿಕಾರಿಗಳಿಗೆ ತಾಕೀತು ಮಾಡಿದ ಬಿ. ದಯಾನಂದ್
ಮಾಡಿದುಣ್ಣೋ ಮಾರಾಯ ಅನ್ನುವಂತೆ ಕೊಲೆ ಆರೋಪಿ ನಟ ದರ್ಶನ್ ಗೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿದೆ. ಈಗಾಗಲೇ ಪೊಲೀಸ್ ಕಡತಗಳಲ್ಲಿ ದರ್ಶನ್ ಗೆ ಅಲಿಯಾಸ್ ಪಟ್ಟ ಕಟ್ಟಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಸೆಲೆಬ್ರೆಟಿ ಮುಖವಾಡದ ದರ್ಶನ್ ಗೆ ಇರೋ ಸಮಾಜಘಾತುಕರ ಲಿಂಕ್ ಕಂಡು ಪೊಲೀಸ್ ಇಲಾಖೆಗೆಯೇ ಬೆಚ್ಚಿ ಬಿದ್ದಿದೆ.
ಈ ನಡುವೆ ಜೈಲಲ್ಲಿ ಆತಿಥ್ಯ ಪಡೆದ ಪ್ರಕರಣದಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ದರ್ಶನ್ ಎ1 ಆರೋಪಿಯಾಗಿದ್ದಾನೆ. ಈ ಪ್ರಕರಣ ಸಂಬಂಧ ದರ್ಶನ್ ವಿಚಾರಮೆಗೆ ಎಸಿಎಂಎಂ ನ್ಯಾಯಾಲಯ ಮನವಿಯನ್ನು ಕೂಡಾ ಕೊಟ್ಟಿದೆ. ಮಾತ್ರವಲ್ಲದೆ ಇಡೀ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ಖುದ್ದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರೇ ವಹಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ತನಿಖಾಧಿಕಾರಿಗಳಿಗೆ ಸೂಚನೆಯನ್ನು ಕೂಡಾ ಕೊಡಲಾಗಿದೆ.
ಈ ನಡುವೆ ಜೈಲಿನಿಂದ ಫೋಟೋ ಹೊರಗಡೆ ಬಂದಿದ್ದು ಹೇಗೆ ಅನ್ನೋ ಕುರಿತಂತೆ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ.
ಫೋಟೋ ವೈರಲ್ ಗೂ ಮುನ್ನ ನಡೆದ ಅಸಲಿ ಕಹಾನಿ
ಕೊಲೆ ಆರೋಪಿ ದರ್ಶನ್ ಕುಖ್ಯಾತರ ಜೊತೆಗೆ ಕುರ್ಚಿಯಲ್ಲಿ ಕೂತು ಸಿಗರೇಟ್ ಸೇವಿಸಿ ಹರಟುತ್ತಿರುವ ದೃಶ್ಯವನ್ನು ಮೊದಲು ಸೆರೆ ಹಿಡಿದದ್ದು ರೌಡಿಶೀಟರ್ ವೇಲು. ವಿಲ್ಸನ್ ಗಾರ್ಡನ್ ನಾಗನ ಸಹಚರನಾಗಿರುವ ವೇಲು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾನೆ.
ಆಗಸ್ಟ್ 22 ರಂದು ದರ್ಶನ್ ಸೇರಿ ನಾಲ್ವರು ಒಂದೆಡೆ ಕೂತು ಹರಟುತ್ತಿರುವಾಗ ವೇಲು ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆದು ಅದನ್ನು ತನ್ನದೇ ಪತ್ನಿಗೆ ಕಳುಹಿಸಿದ್ದ. ಡಿ ಬಾಸ್ ನಮ್ಮ ಬಾಸ್ ವಿಲ್ಸನ್ ನಾಗನನ್ನು ಭೇಟಿಯಾಗಿದ್ದಾರೆ ಎಂದು ಪತ್ನಿ ಮುಂದೆ ಕೊಚ್ಚಿಕೊಂಡಿದ್ದ.
ವೇಲು ಪತ್ನಿಯ ವಾಟ್ಸಾಪ್ ಗೆ ಬಂದ ಫೋಟೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋ ಇದೀಗ ಕೊಲೆ ಆರೋಪಿ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಎತ್ತಂಗಡಿ ಮಾಡುವಂತೆ ಮಾಡಿದೆ.