Advertisements

ರವಿಬೆಳಗೆರೆಯವರೇ ಅವರು ಅಪ್ರಸ್ತುತ ಅನ್ನುವುದಾದರೆ… ಈ ಕಾಲಕ್ಕೆ ನಿಜಕ್ಕೂ ನೀವು ಪ್ರಸ್ತುತರೇ…..

ಬಿಗ್ ಬಾಸ್ ಸೀಸನ್ 7 ನಿಧಾನವಾಗಿ ಬಿಸಿಯೇರಲಾರಂಭಿಸಿದೆ. ಒಂದೇ ಮನೆಯ ಸದಸ್ಯರಂತೆ ನಾವಿರಬೇಕು ಎಂದು ಪ್ರತಿಜ್ಞೆ ಮಾಡಿದ ಮಂದಿ ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ತಮ್ಮ ಗೆಲುವಿನ ನಾಗಲೋಟಕ್ಕೆ ಅಡ್ಡಿಯಾದವರನ್ನು ಹೊಡೆದುರಿಳಿಸುವುದಕ್ಕೆ ಮಾಸ್ಟರ್ ಪ್ಲಾನ್ ಗಳನ್ನು ತಮಗೆ ಗೊತ್ತಿಲ್ಲದಂತೆ ಹೆಣೆಯಲಾರಂಭಿಸಿದ್ದಾರೆ.

ಅದಕ್ಕೆ ಸಾಕ್ಷಿಯಾಗಿದ್ದು ಸೋಮವಾರ ಅಂದ್ರೆ ಸೀಸನ್ 7 ರ ಎರಡನೇ ದಿನ.ನಾಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಒಂದೇ ದಿನದಲ್ಲಿ ವ್ಯಕ್ತಿಗಳನ್ನು ವ್ಯಕ್ತಿತ್ವವನ್ನು ಅಳೆದ ಸ್ಪರ್ಧಿಗಳು ನಾಮಿನೇಷನ್ ಮಾಡಿದ್ದಾರೆ.

ಈ ಪೈಕಿ ರವಿಬೆಳಗೆರೆ ನಾಮಿನೇಷನ್ ಗೆ ಕೊಟ್ಟ ಕಾರಣಗಳು ಅವರ ವೈಯುಕ್ತಿಕ ಅಭಿಪ್ರಾಯ ಇರಬಹುದು ಆದರೆ ಅದು ಒಳ್ಳೆಯ ಜೋಕ್ ಅನ್ನಿಸಿದ್ದು ಸುಳ್ಳಲ್ಲ.

ರಾಜು ತಾಳಿಕೋಟೆಯವರನ್ನು ನಾಮಿನೇಷನ್ ಮಾಡಿರುವ ಬೆಳಗೆರೆ ಅವರೊಬ್ಬರು ನಶಿಸಿ ಹೋಗಿರುವ ಕಲಾವಿದ. ಈ ಸಮಾಜಕ್ಕೆ ಅಪ್ರಸ್ತುತ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಗುರುಲಿಂಗ ಸ್ವಾಮೀಜಿ ಕೂಡಾ ಅಪ್ರಸ್ತುತ ಅಂದಿದ್ದು ಮಾತ್ರವಲ್ಲದೆ, ಅವರೊಬ್ಬರು ಸೆಲೆಬ್ರೆಟಿಯೇ ಅಲ್ಲ, ಅವರ ಹೆಸರನ್ನು ನಾನು ಕೇಳಿಯೇ ಇಲ್ಲ ಎಂದು ಟೀಕಿಸಿದ್ದಾರೆ.

ಗುರುಲಿಂಗ ಸ್ವಾಮೀಜಿ ಹೆಸರು ಕೇಳಿಲ್ಲ ಅಂದ್ರೆ ಅದು ಬೆಳಗೆರೆಯವರ ಲೋಕಜ್ಞಾನದ ಕೊರತೆ ಅನ್ನುವುದರಲ್ಲಿ ಸಂಶಯವಿಲ್ಲ. ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಮಾಡಿರುವ ಕೆಲಸಗಳು ನೂರಾರು. ಮಠದಲ್ಲಿನ ಅನ್ನ ದಾಸೋಹ. ಪರಿಸರ ಕಾಳಜಿ ಮೂಲಕ ಲಿಮ್ಕಾ ರೆಕಾರ್ಡ್ ಹೀಗೆ ಸಮಾಜ ಮುಖಿ ಕಾರ್ಯಗಳು ಒಂದಲ್ಲ, ಎರಡಲ್ಲ.

ಇನ್ನು ಕೃಷ್ಣಾ ನದಿ ನೀರು ಹೋರಾಟ ವಿಚಾರದಲ್ಲೂ ಸ್ವಾಮೀಜಿಯವರು ಸಾಕಷ್ಟು ದುಡಿದಿದ್ದಾರೆ.

ರಾಜು ತಾಳಿಕೋಟೆ ಬಗ್ಗೆ ಅಪ್ರಸ್ತುತ ಅನ್ನುವುದೇ ಅಪ್ರಸ್ತುತ. ಒಂದು ಕಾಲದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಟ್ಟವರು ಅವರು, ಜನರನ್ನು ನಗಿಸಿದವರು. ರಂಗಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಹಾಗಿರುವಾಗ ಅವರು ನಶಿಸಿ ಹೋದ ಕಲಾವಿದ ಎಂದು ಪರಿಗಣಿಸುವುದು ಹೇಗೆ.

ಸರಿ ಅವರು ನಶಿಸಿ ಹೋದ ಕಲಾವಿದ. ಹಾಗಾದ್ರೆ ರವಿಬೆಳಗೆರೆ ಕೂಡಾ ನಶಿಸಿ ಹೋದ ಬರಹಗಾರನೇ ಸರಿ. ಒಂದು ಕಾಲದಲ್ಲಿ ಅದ್ಭುತ ಪುಸ್ತಕಗಳನ್ನು ಬರೆದ ಬೆಳಗೆರೆ ಇತ್ತೀಚೆಗೆ ಬರೆದ ಪುಸ್ತಕಗಳನ್ನು ಓದಿ ಓದುಗರೇ ಉಗಿಯುತ್ತಿದ್ದಾರೆ. ಲೀಲಾವತಿಯವರ ಬಗ್ಗೆ ಬರೆದ ಪುಸ್ತಕದಿಂದ ಪ್ರಾರಂಭಿಸಿ ಇತ್ತೀಚೆಗೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಬರೆದ ಪುಸ್ತಕ ಹಾಗೂ ಅದಕ್ಕಿಂತ ಹಿಂದೆ ಬರೆದ ಪುಸ್ತಕಗಳನ್ನು ಎರಡು ತಕ್ಕಡಿಯಲ್ಲಿ ಹಾಕಿ ತೂಗಿ ನೋಡಿ.

ಬೆಳಗೆರೆಯವರ ಬರೆಯುವ ತಾಕತ್ತು ಕಡಿಮೆಯಾಗಿದೆ. ಅಕ್ಷರಗಳ ಜೊತೆಗೆ ಆಟವಾಡುವ ಹಿಡಿತ ತಪ್ಪಿ ಹೋಗಿದೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಕಲೆ ಅವರಲ್ಲಿ ಉಳಿದಿಲ್ಲ. ಅಂದ ಮೇಲೆ ರವಿ ಬೆಳಗೆರೆ ನಿಜಕ್ಕೂ ಅಪ್ರಸ್ತುತರಲ್ಲವೇ.

ಬೆಳಗೆರೆಯವರು ನಾಮೀನೇಟ್ ಮಾಡಿದ ಇಬ್ಬರು ಈ ಸಮಾಜಕ್ಕೆ ಅಪ್ರಸ್ತುತರು ಅನ್ನುವುದಾದರೆ ಬೆಳಗೆರೆ ಕೂಡಾ ಅಪ್ರಸ್ತುತರು ಅನ್ನುವುದರಲ್ಲಿ ಸಂಶಯವಿಲ್ಲ.

Advertisements

ಜೊತೆ ಜೊತೆಯಲ್ಲಿ ಧಾರಾವಾಹಿ ಕತೆ ಮೇಲೆ ಬಂತಲ್ಲ ಅಪವಾದ…!

ಕನ್ನಡದ ಸೀರಿಯಲ್ ಲೋಕದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ. ಪ್ರಸಾರ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಹಿರಿಮೆ ಇದರದ್ದು.

ಇದಕ್ಕೆ ಕಾರಣ ಹಲವು. ಇಲ್ಲಿ ಕಾಣಿಸಿಕೊಂಡಿರುವ ಕಲಾವಿದರು ಒಂದು ಕಾರಣವಾದರೆ, ಆರೂರು ಜಗದೀಶ್ ಅವರ ನಿರ್ದೇಶನ ಮತ್ತೊಂದು ಕಾರಣ. ಜೊತೆಗೆ ಈ ಧಾರಾವಾಹಿಯ ಕಥೆಯೂ ಅಷ್ಟೇ ಚೆನ್ನಾಗಿರುವ ಕಾರಣದಿಂದ ಸೀರಿಯಲ್ ಸೂಪರ್ ಹಿಟ್ ಆಗಿದೆ.

ಆದರೆ ಈ ಧಾರಾವಾಹಿಯ ಕಥೆ ಕನ್ನಡದ ಮೂಲದ್ದಲ್ಲ. ಮರಾಠಿಯಲ್ಲಿ ಪ್ರಸಾರವಾದ ಧಾರಾವಾಹಿಯನ್ನು ಕನ್ನಡಕ್ಕೆ ಫಿಲ್ಟರ್ ಮಾಡಲಾಗಿದೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ.

ಪ್ರಶ್ನೆ ಇರುವುದು ಕನ್ನಡದಲ್ಲಿ ಇಷ್ಟೊಂದು ಸುಂದರ ಕಥೆಗೆ ಕೊರತೆ ಇದೆಯೇ. ಅಥವಾ ಕನ್ನಡದಲ್ಲಿ ಅವಕಾಶಕ್ಕೆ ಕೊರತೆ ಇದೆಯೇ. ವಾಹಿನಿಗಳು ತಮ್ಮ ನೆಟ್ ವರ್ಕ್ ಗಳಿಂದ ಕಥೆಗಳನ್ನು ಎರವಲು ಪಡೆಯುವಲ್ಲಿ ಬ್ಯುಸಿಯಾಗಿದೆ. ಇದರ ಬದಲಾಗಿ ಕನ್ನಡಿಗರೇ ಬರೆದ ಕಥೆಗಳಿಗೆ ಅವಕಾಶ ಕೊಟ್ಟರೆ ಈ ವಾಹಿನಿಗಳಿಗೆ ಪುಣ್ಯ ಬರುತ್ತದೆ.

ಮಾರುಕಟ್ಟೆಯಿಂದ ಮಾಯವಾಗಲಿದೆಯೇ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು

ಕಳೆದ ಕೆಲ ಸಮಯದಿಂದ ಎಟಿಎಂಗಳಲ್ಲಿ 2 ಸಾವಿರ ನೋಟುಗಳ ವಿತರಣೆ ನಿಂತು ಹೋಗಿದೆ. ಬದಲಾಗಿ ಬೇರೆ ಮುಖ ಬೆಲೆಯ ನೋಟುಗಳು ಹೆಚ್ಚಾಗಿ ವಿತರಣೆಯಾಗುತ್ತಿದೆ. ಹೀಗ್ಯಾಕೆ ಎಂದು ತಲೆ ಕೆಡಿಸಿಕೊಂಡವರಿಗೆ ಇದೀಗ ಉತ್ತರ ಸಿಕ್ಕಿದ್ದು, ದೊಡ್ಡ ಮೊತ್ತದ ಮುಖ ಬೆಲೆಯ ನೋಟುಗಳ ಮುದ್ರಣವನ್ನು ಆರ್.ಬಿ.ಐ ಇದೀಗ ಸ್ಥಗಿತಗೊಳಿಸಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್” ಪತ್ರಿಕೆ ಆರ್.ಟಿ.ಐ. ಮೂಲಕ ಸಲ್ಲಿಸಿದ್ದ ಅರ್ಜಿಗೆ ರಿಸರ್ವ್ ಬ್ಯಾಂಕ್ ಕೊಟ್ಟಿರುವ ಉತ್ತರದಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಈ ಹಣಕಾಸು ವರ್ಷದಲ್ಲಿ 2,000 ರೂ ಮುಖಬೆಲೆಯ ಒಂದೇ ಒಂದು ನೋಟು ಮುದ್ರಣಗೊಳ್ಳದೇ ಇರುವ ಕಾರಣದಿಂದ ಎಟಿಎಂಗಳಿಗೆ 2 ಸಾವಿರ ಮುಖ ಬೆಲೆಯ ನೋಟಿನ ಹರಿವು ನಿಂತು ಹೋಗಿದೆ.

ಈ ಕ್ರಮ ಹಣದ ಅಕ್ರಮ ಸಂಗ್ರಹ ತಡೆಯಲು ಸಹಕಾರಿಯಾಗಲಿದೆ ಜೊತೆಗೆ ಕಪ್ಪು ಹಣದ ಹರಿವನ್ನು ತಡೆಯುವ ಸರ್ಕಾರದ ಪ್ರಯತ್ನಕ್ಕೂ ಸಾಥ್ ನೀಡಲಿದೆಯಂತೆ.

ಹಾಗಾದರೆ ಎರಡು ಸಾವಿರ ರೂಪಾಯಿ ನೋಟು ನಿಧಾನವಾಗಿ ಮಾರುಕಟ್ಟೆಯಿಂದ ಮಾಯವಾಗಲಿದೆಯೇ, ಪರಿಸ್ಥಿತಿ ನೋಡಿದರೆ ಹಾಗೇ ಅನ್ನಿಸುತ್ತಿದೆ.

ನವೆಂಬರ್ 2016ರಲ್ಲಿ ಹಳೆಯ `500 ಮತ್ತು` 1,000 ಮುಖಬೆಲೆಯ ನೋಟುಗಳನ್ನು  ನಿಷೇಧಿಸುವುದಾಗಿ ಸರ್ಕಾರದ ದಿಢೀರ್ ಎಂದು ಘೋಷಿಸಿತ್ತು. ಬಳಿಕ ಆರ್‌ಬಿಐ 2,000 ರೂ ನೋಟುಗಳನ್ನು ಪರಿಚಯಿಸಿತ್ತು.

ರಿಸರ್ವ್ ಬ್ಯಾಂಕ್ ಕೊಟ್ಟಿರುವ ಆರ್‌ಟಿಐ ಉತ್ತರದ ಪ್ರಕಾರ, 2016-17ರ ಆರ್ಥಿಕ ವರ್ಷದಲ್ಲಿ 2,000 ರೂಗಳ 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ.ಆದಾಗ್ಯೂ, 2017-18ನೇ ಸಾಲಿನಲ್ಲಿ ಮುದ್ರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಮತ್ತು ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಿಸಲಾಗಿದೆ.ಇನ್ನು  2018-19ನೇ ಸಾಲಿನಲ್ಲಿ 46.690 ಮಿಲಿಯನ್ ನೋಟುಗಳು ಮುದ್ರಣವಾಗಿದೆ.

ಈ ವರ್ಷದ ಆರಂಭದಲ್ಲಿ 2,000 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದೆಯೆಂದು ವರದಿಗಳು ಬಂದಿದ್ದವು, ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು.

ಮಾರ್ಚ್ 2018ರಲ್ಲಿ ಚಲಾವಣೆಯಲ್ಲಿರುವ ಒಟ್ಟೂ ನೋಟುಗಳ ಪ್ರಮಾಣದಲ್ಲಿ ಕೇವಲ ಶೇ.3.3ರಷ್ಟು 2,000 ಮುಖಬೆಲೆ ನೋಟುಗಳಿದ್ದವು. ಇದು 2019 ಹಣಕಾಸು ವರ್ಷದಲ್ಲಿ ಶೇ.3ಕ್ಕೆ ಇಳಿಕೆಯಾಗಿದೆ.

ಕಳ್ಳಸಾಗಣೆಯಂತಹ ಅಕ್ರಮ ಉದ್ದೇಶಗಳಿಗಾಗಿ ಬಳಸಲು ಈ ನೋಟುಗಳು ಸುಲಭವಾದ ಕಾರಣ 2,000 ರೂ ನೋಟುಗಳ ಹೆಚ್ಚಿನ ಚಲಾವಣೆಗೆ ಕಡಿವಾಣ ಹಾಕುವುದರಿಂದ ಅಕ್ರಮ ಸಾಗಾಟಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ಇದೆ.

ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್

ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ..

ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ಈ ಹಿಂದೆ ರಾಜೇಶ್ವರಿ ನಟಿಸುತ್ತಿದ್ದರು.ವೈಯುಕ್ತಿಕ ಕಾರಣಗಳಿಂದ ಅವರು ಅಗ್ನಿ ಸಾಕ್ಷಿ ತಂಡವನ್ನು ತೊರೆದಿದ್ದರು. ಅಷ್ಟು ಹೊತ್ತಿಗಾಗಲೇ ರಾಜೇಶ್ವರಿ ಚಂದ್ರಿಕಾ ಪಾತ್ರಕ್ಕೊಂದು ತೂಕ ತಂದು ಕೊಟ್ಟಿದ್ದರು. ರಾಜೇಶ್ವರಿ ಅಗ್ನಿ ಸಾಕ್ಷಿ ತಂಡ ತೊರೆಯುತ್ತಿದ್ದಂತೆ ಮುಂದೆ ಯಾರು ಅನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

ಈ ವೇಳೆ ಎಂಟ್ರಿ ಕೊಟ್ಟವರು ಪ್ರಿಯಾಂಕ. ರಾಜೇಶ್ವರಿ ಅವರ ಹೆಸರನ್ನು ಮರೆ ಮಾಚುವ ರೀತಿಯಲ್ಲಿ ನಟಿಸಿದ ಪ್ರಿಯಾಂಕ ಚಂದ್ರಿಕಾ ಪಾತ್ರಕ್ಕೊಂದು ತೂಕ ತಂದುಕೊಟ್ಟರು.

Planning ಚಂದ್ರಿಕಾ ಆಗಿಯೇ ಪ್ರಸಿದ್ಧಿಯನ್ನು ಪಡೆದ ಪ್ರಿಯಾಂಕ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದರು. ಇದೀಗ ಪಾಸಿಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ನಾನು ನಾನಾಗಿರಬೇಕು ಅನ್ನುವ ಕಾರಣಕ್ಕೆ ಮನೆಯೊಳಗೆ ಬಂದಿದ್ದಾರೆ ಪ್ರಿಯಾಂಕ ಆಲಿಯಾಸ್ ಚಂದ್ರಿಕಾ.

ನಿರ್ಮಾಪಕರೊಂದಿಗಿನ ಜಗಳದ ಮೂಲಕ ಸುದ್ದಿಯಾಗಿದ್ದ ಹರೀಶ್ ರಾಜ್ ಇದೀಗ ಮಹಾಮನೆ ಅಂಗಳದಲ್ಲಿ…

ನಿಗೂಢ’ ಚಿತ್ರದ ಚಿತ್ರೀಕರಣಕ್ಕಾಗಿ ಕೊಟ್ಟಿಗೆ ಹಾರಕ್ಕೆ ಹೋಗಿದ್ದೆ. ಅಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿರಲಿಲ್ಲ. ಇದನ್ನೇ ತಪ್ಪಾಗಿ ಅರ್ಥೆಸಿಕೊಂಡು ಸಾಲಕೊಡದೆ ತಲೆಮರೆಸಿಕೊಂಡಿದ್ದಾನೆ ಎಂದು ನಿರ್ಮಾಪಕ ಮುರಳಿ ನನ್ನ ಮೇಲೆ ವಿನಾಕಾರಣ ವಂಚನೆ ಆರೋಪ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದ್ದವರು ಹರೀಶ್ ರಾಜ್.

‘ಗನ್ ಚಿತ್ರದ ನಟ, ನಿರ್ದೇಶಕ ಜವಾಬ್ದಾರಿ ಹೊತ್ತುಕೊಂಡಿದ್ದ  ಹರೀಶ್ ರಾಜ್ ವಿರುದ್ಧ ನಿರ್ಮಾಪಕ ಮುರಳಿ ಅನ್ನುವ ದೂರು ಕೊಟ್ಟ ಕಾರಣದಿಂದ ಕೆಲ ತಿಂಗಳ ಹಿಂದೆ ವಿವಾದ ಸೃಷ್ಟಿಯಾಗಿತ್ತು. ಆ ಮೇಲೆ ಸಾಲದ ಗಲಾಟೆ ಏನಾಯ್ತೋ ಗೊತ್ತಿಲ್ಲ.

ಗನ್, ಕಿಲಾಡಿ ಪೊಲೀಸ್ ಸೇರಿದಂತೆ ಕನ್ನಡದಲ್ಲಿ 15 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಹರೀಶ್ ರಾಜ್ ಇದೀಗ 18ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಒಂದು ಕಾಲದಲ್ಲಿ ಹರೀಶ್ ರಾಜ್ ಸಾಕಷ್ಟು ಬೇಡಿಕೆಯ ಕಲಾವಿದರಾಗಿದ್ದರು. ವಿಭಿನ್ನ ಪ್ರಯೋಗಗಳಿಗೂ ಇಳಿದಿದ್ದ ಅವರಿಗೆ ಅದೃಷ್ಟ ಕೈ ಹಿಡಿದಿರಲಿಲ್ಲ. ಹಾಗಂತ ಅವರು ಸೋತಿರಲಿಲ್ಲ.

ಮಹಾಮನೆಯಲ್ಲಿ ಕರಾವಳಿ ಮಂದಿಗೆ ಸಿಂಹಪಾಲು : ಶೈನ್ ಶೆಟ್ಟಿ ಶೈನ್ ಆಗ್ತಾರ ಇಂಚ….?

ಮೀರಾ ಮಾಧವ, ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಶೈನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಅಡಿಯಿಟ್ಟಿದ್ದಾರೆ.

ಕರಾವಳಿ ಮೂಲದ ಇವರಿಗೆ ಸಿನಿಮಾ ರಂಗದಲ್ಲಿ ಬೆಳೆಯಬೇಕು ಅನ್ನುವ ಆಸೆಯಿದೆ. ಬದುಕಿನಲ್ಲಿ ಯಾವುದಕ್ಕೂ ಹಿಂಜಿರಿಯದ ಇವರ ತಾಕತ್ತಿಗೆ ಮೊಬೈಲ್ ಕ್ಯಾಂಟೀನ್ ಬೆಸ್ಟ್ ಉದಾಹರಣೆ. ಬನಶಂಕರಿ ಸಮೀಪ ಮೊಬೈಲ್ ಕ್ಯಾಂಟೀನ್ ನಡೆಸುವ ಈ ನಟ ಬಿಗ್ ಬಾಸ್ ಮನೆಯಲ್ಲಿ ಮನ ಗೆಲ್ಲುವ ತಾಕತ್ತು ಹೊಂದಿದ್ದಾರೆ.

ಇನ್ನು ‘ಕ’ಸೇರಿದಂತೆ ಕನ್ನಡದಲ್ಲಿ ಒಂದಷ್ಟು ಸಿನಿಮಾ ಹಾಗೂ ಸೀರಿಯಲ್ನಲ್ಲಿ ಅಭಿನಯಿಸಿರುವ ನಟ ಶೈನ್ ಮತ್ತೊಮ್ಮೆ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸೂಜಿದಾರದ ಚೈತ್ರಾ ಕೋಟೂರ್ ಮಹಾಮನೆಯ ಏಕೈಕ ಬರಹಗಾರ್ತಿ…

‘ಸೂಜಿದಾರ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟಿ ಚೈತ್ರಾ ಕೋಟೂರ್ ಈ ಬಾರಿಯ ಬಿಗ್‌ ಬಾಸ್‌ಗೆ 16ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ, ಸಿನಿಮಾಗಳ ನಿರ್ದೇಶನದ ತಂಡದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

ಹುಣ್ಣಿಮೆ ರಾತ್ರಿಯಲಿ, ಹರಕು ಚಾಪೆಯಲಿ ನಾನು ಸುಮ್ಮನೆ ಮಲಗಿರಲು ಎಂಬ ಅದ್ಭುತ ಸಾಲುಗಳನ್ನು ಬರೆದವರು ಇದೇ ಚೈತ್ರಾ ಕೋಟೂರ್. ಸೂಜಿದಾರ ಸಿನಿಮಾಕ್ಕಾಗಿ ಬರೆದ ಈ ಹಾಡು ಎಲ್ಲರ ಮನವನ್ನು ತಟ್ಟಿತ್ತು.

ವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂ ಮಾಡುತ್ತಿರುವ ಸಂದರ್ಭದಲ್ಲಿ ಕೋಟೂರ್ ಹೆಸರು ಕೂಡಾ ಇದೇ ಹೊಸಬರ ಪಟ್ಟಿಯಲ್ಲಿದೆ.

ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ಅಭಿನಯ ಚಾತುರ್ಯ, ಅಭಿನಯವನ್ನು ಅದರ ಎಲ್ಲ ಆಯಾಮಗಳಲ್ಲಿ ತಮ್ಮೊಳಗೇ ವ್ಯಾಖ್ಯಾನಿಸಿಕೊಂಡು ಪ್ರಸ್ತುತಪಡಿಸಬಲ್ಲ ಶಕ್ತಿ ಮತ್ತು ಇದಕ್ಕೆ ಇನ್ನಷ್ಟು ಪ್ರಖರತೆಯನ್ನು ಕೊಡಲು ಸಾಧ್ಯವಾಗುವಂತೆ ಬರವಣಿಗೆಯಲ್ಲೂ ಪ್ರತಿಭೆಯನ್ನು ಹೊಂದಿರುವುದು.

ತಮಗಿರುವ ರಂಗಭೂಮಿ ಹಿನ್ನೆಲೆಯನ್ನು ನಟನೆಯ ಹೊತ್ತಿನಲ್ಲಿ ದುಡಿಸಿಕೊಳ್ಳುವ ಗುಣ ಮತ್ತು ಅವರ ಆಲೋಚನೆಯ ಬಗೆಯು ಚೈತ್ರಾ ಅವರನ್ನು ಇತರ ನಟಿಯರಿಗಿಂತ ಭಿನ್ನವಾಗಿಸಿದೆ. ಹಾಗಾಗಿಯೇ ಅವರು ನಿರ್ವಹಿಸುವ ಪಾತ್ರಗಳು ಕೂಡ ಅವರದೇ ನಿಲುವಿನಿಂದಲೂ ರೂಪ ಪಡೆಯುವುದಕ್ಕೆ ಅವಕಾಶವಿರುವುದು. ನಿರ್ದೇಶನದ ಕಡೆಗೂ ಅವರಿಗೆ ವಿಶೇಷ ಒಲವು.

ಚೈತ್ರಾ ಅವರಿಗಿರುವ ಬರವಣಿಗೆಯ ಬಾಂಧವ್ಯ ಅವರ ಬಿಗ್ ಬಾಸ್ ಕನಸುಗಳಿಗೆ ಇನ್ನಷ್ಟು ಮೆರುಗು ಕೊಟ್ಟಿದೆ. ನಟಿಯಾಗುವುದಕ್ಕಿಂತಲೂ ಅವರಿಗೆ ನಿರ್ದೇಶಕಿಯಾಗಬೇಕು ಅನ್ನುವ ಕನಸಿದೆ. ಸಿನಿಮಾ ಅನುಭವ ಇಲ್ಲದವರೇ ನಿರ್ದೇಶಕರಾಗುವ ಬದಲು ಚೈತ್ರಾರಂತಹ ಅನುಭವಿಗಳು ಮತ್ತು ಮನಸ್ಸಿಗೆ ತಟ್ಟಬಲ್ಲಂತೆ ಬರೆಯಬಲ್ಲವರು ನಿರ್ದೇಶಕಿಯಾದರೆ ಒಂದೊಳ್ಳೆ ಚಿತ್ರ ಬರುವುದರಲ್ಲಿ ಸಂಶಯವಿಲ್ಲ.

ಕಿರಗೂರಿನ ಗಯ್ಯಾಳಿಗಳು, ಉರಿಯ ಉಯ್ಯಾಲೆ, ಬೆಂಕಿ ಬೆಡಗು, ರಶೋಮನ್ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ಅವರು ಅನುರಾಗ ಸಂಗಮ, ಸೌಭಾಗ್ಯವತಿ, ಧಾರವಾಹಿಗಳಲ್ಲೂ ಕಾಣಿಸಿತಕೊಂಡಿದ್ದಾರೆ. ಅರಿವಿನ ಮನೆ, ನಿಗೂಢ ರಹಸ್ಯ ಅನ್ನುವ ಚಿತ್ರಗಳಲ್ಲೂ ಇವರು ಅಭಿನಯಿಸಿದ್ದಾರೆ.

ಸೂಜಿದಾರ ಚೈತ್ರಾ ಅವರಿಗೊಂದು ಹೆಸರು ತಂದುಕೊಟ್ಟ ಚಿತ್ರ. ಸ್ವಂತ ಸಿನಿಮಾ ನಿರ್ದೇಶನಕ್ಕಾಗಿ ಕಥೆಗಳನ್ನು ಸಿದ್ದಪಡಿಸಿಕೊಂಡಿರುವ ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೋ ಗೊತ್ತಿಲ್ಲ. ಜನರನ್ನು ಅದೆಷ್ಟರ ಮಟ್ಟಿಗೆ ರಂಜಿಸುತ್ತರೋ ಗೊತ್ತಿಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಇವರಿಂದ ಒಳ್ಳೆಯ ಚಿತ್ರ ಬರಲಿ ಅನ್ನುವ ಎಲ್ಲರ ಹಾರೈಕೆ.

ಮಹಾಮನೆಯಲ್ಲಿ ಕ್ಯೂಟ್ ನಿರೂಪಕಿ : ಸ್ಟಾರ್ ಗಿರಿಯನ್ನು ಕೆಳಗಿಳಿಸಿದ್ರೆ ಗೆಲುವಿನ ನಡೆ ಸುಲಭ…

ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ ಬಿಗ್ ಬಾಸ್ ಗೆ ಹೋಗಿ ಬಂದ ಪ್ರಮುಖ ನಿರೂಪಕ ಹಾಗೂ ನಿರೂಪಕಿಯರಾಗಿದ್ದಾರೆ.

ಇದೀಗ ಚೈತ್ರ ವಾಸುದೇವನ್ ಅನ್ನುವ ಕ್ಯೂಟ್ ನಿರೂಪಕಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿರುವ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, ‘ಕಲರ್ಸ್ ಕನ್ನಡ ಸಿನಿಮಾ’ ವಾಹಿನಿಯ ‘ಒಂದು ಸಿನಿಮಾ ಕತೆ’ ಕಾರ್ಯಕ್ರಮವನ್ನು ಚೈತ್ರ ವಾಸುದೇವನ್ ನಿರೂಪಣೆ ಮಾಡುತ್ತಿದ್ದಾರೆ.

ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ಟಿವಿ ವಾಹಿನಿಗಳಲ್ಲಿ ಚೈತ್ರ ವಾಸುದೇವನ್ ಕೆಲಸ ಮಾಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಈ ನಿರೂಪಕಿಗೆ ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಿದೆ.

ಮಾತಿನ ಶೈಲಿ ನೋಡಿದರೆ ನನಗೆಲ್ಲವೂ ಗೊತ್ತಿದೆ ಅನ್ನುವಂತಿದೆ. ಆದರೆ ಬಿಗ್ ಬಾಸ್ ಮನೆ ಅನ್ನುವುದು ಎಲ್ಲವೂ ಗೊತ್ತಿದೆ ಅನ್ನುವವರನ್ನು ಸಿಕ್ಕಾಪಟ್ಟೆ ಆಟ ಆಡಿಸಿದೆ.

ನಾನು ನಾನಾಗಿರುತ್ತೇನೆ, ನಾನು ನಾನಾಗಿರಬೇಕು ಎಂದು ಹೋದವರೆಲ್ಲಾ ಕ್ಯಾರೆಕ್ಟರ್ ಪೈರೆಸಿ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅದೊಂದು ಎಡವಟ್ಟನ್ನು ಜೈತ್ರಾ ತಪ್ಪಿಸಿಕೊಂಡರೆ ಒಂದಿಷ್ಟು ವಾರ ವೀಕ್ಷಕರ ಓಟಿಗೆ ಬರವಿರಲಾರದು.

ಫಿಟ್‌ನೆಸ್, ಫ್ಯಾಷನ್ ಪ್ರಿಯೆ ಚೈತ್ರಾ. ಈಕೆಗೆ ಶೂ ಮತ್ತು ಬಟ್ಟೆಗಳೆಂದರೆ ಬಲು ಇಷ್ಟ. ಹೊಸ ಹೊಸ ವಿಷಯಗಳ ಬಗ್ಗೆ ವಿಡಿಯೋ ಮಾಡಿ ಅದನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ ಚೈತ್ರಾ. ಬಗೆಬಗೆಯ ಫೋಟೋ ಶೂಟ್‌ಗಳನ್ನು ಮಾಡಿಸಿಕೊಳ್ಳುವ ಚೈತ್ರಾಳಿಗೆ ಕಾರ್, ಬೈಕ್ ಎಂದರೆ ಎಲ್ಲಿಲ್ಲದ ಇಷ್ಟ. ಪ್ರತಿವಾರ ‘ಸಿನಿಮಾ ಕಥೆ’ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಆಗಾಗ ಬ್ಯೂಟಿ ಟಿಪ್ಸ್, ಅಡುಗೆ ಬಗ್ಗೆಯೂ ಚೈತ್ರಾ ವಿಡಿಯೋ ಮಾಡಿ ಜನರೊಂದಿಗೆ ಹಂಚಿಕೊಳ್ಳುತ್ತಾರೆ. ಹಲವಾರು ಪ್ರತಿಷ್ಠಿತ ಶೋಗಳನ್ನು ನಿರೂಪಿಸಿದ ಖ್ಯಾತಿ ಚೈತ್ರಾ ವಾಸುದೇವನ್‌ರದ್ದು. ‘ಇವೆಂಟ್ ಫ್ಯಾಕ್ಟರಿ’ ಮೂಲಕ ಇವೆಂಟ್‌ಗಳನ್ನೂ ಕೂಡ ಇವರು ನಡೆಸಿಕೊಡುತ್ತಿದ್ದಾರೆ.

ಇಬ್ಬರು ಹೆಂಡಿರ ಮುದ್ದಿನ ರಾಜು ತಾಳಿಕೋಟೆ…. ನಗು ತರಿಸಿದ್ರೆ ತಾಳಿಯಾನು…

ನಾನು ಜಾತಿಯಿಂದ ಮುಸ್ಲಿಂ. ಆದರೆ ನನ್ನ ಹೆಂಡತಿ ಹಿಂದೂ. ಹಾಗಾಗಿ ನಮ್ಮ ಮನೆಯಲ್ಲಿ ರಂಜಾನ್ ಹಾಗೂ ರಾಮನವಮಿ ಎರಡೂ ಆಚರಿಸಲಾಗುತ್ತದೆ ಎಂದಿದ್ದಾರೆ ರಾಜು ತಾಳಿಕೋಟೆ. ದ್ರಾಕ್ಷಿ ಕೃಷಿಯನ್ನೂ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದ, ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಬಿಗ್ ಬಾಸ್ ಮನೆಗೆ 14ನೇ ಸ್ಪರ್ಧಿಯಾಗಿ ಅವರು ಪ್ರವೇಶ ಮಾಡಿದ್ದಾರೆ.

ನಾಡು ಎಲ್ಲವನ್ನೂ ಕೊಟ್ಟಿದೆ, ನಾಡಿಗೆ ಏನಾದರೂ ಕೊಡಬೇಕು ಅನ್ನುವ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಬಂದಿರುವ ಇವರು ಈಗಾಗಲೇ ಹನುಮಂತನ ಗುಡಿಯೊಂದನ್ನು ಕಟ್ಟಿಸಿದ್ದಾರೆ. ಅದಕ್ಕೆ ಹೆಂಡತಿ ಕಷ್ಟ ಪಟ್ಟು ಸಂಪಾದಿಸಿದ್ದ ದುಡ್ಡನ್ನು ಸುರಿದಿದ್ದಾರೆ. ಇದೀಗ ರಂಗಾಶ್ರಯ ಅನ್ನುವ ರಂಗ ತರಬೇತಿ ಶಾಲೆ ತೆರೆಯುವ ಉದ್ದೇಶ ಇವರದ್ದು. ಹೀಗಾಗಿ ಇಬ್ಬರು ಮುಂದಿನ ಗಂಡ ನಾನು ಉತ್ತರ ಕರ್ನಾಟಕದವ ಎಂದು ಕಡೆಗಣಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಸುಜಾತ ಸಿತಾರಾ ಅವತಾರ ತಾಳಿದ್ರೆ ಮಹಾ ಮನೆಯಲ್ಲಿ ರಾಡಿ ರಂಪಾಟ ಗ್ಯಾರಂಟಿ…

ಕಿರುತೆರೆಯಲ್ಲಿ ನಿರೂಪಕರಾಗಿ, ನಟಿಯಾಗಿ ಗಮನಸೆಳೆದಿರುವ ಸುಜಾತಾ ಸತ್ಯನಾರಾಯಣ ಕೂಡ ಈಗ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಸದ್ಯ ಅವರು ಸ್ಟಾರ್ ಸುವರ್ಣ ವಾಹಿನಿಗಾಗಿ ಕಿಚನ್ ದರ್ಬಾರ್ ಎಂಬ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಇದಕ್ಕೂ ಮೊದಲು ಸುಜಾತಾ ಸತ್ಯನಾರಾನಾರಾಯಣವರು ‘ರಾಧಾ ರಮಣ’ ಧಾರಾವಾಹಿಯಲ್ಲಿ ಸಿತಾರಾ ಪಾತ್ರದ ಮೂಲಕ ಗಮನಸೆಳೆದಿದ್ದರು. ಖಳ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅವರನ್ನು ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದಾರೆ.

ಸುಜಾತ ಅವರು ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ. ಜೊತೆಗೆ ಸೆಲೆಬ್ರೆಟಿಗಳ ಜೊತೆಗೆ ಸಿಕ್ಕಾಪಟ್ಟೆ ನಂಟಿರುವ ಕಾರಣದಿಂದ ಅವರದ್ದೇ ಆದ ಗತ್ತು ಸುಜಾತ ಅನ್ನುವ ವ್ಯಕ್ತಿತ್ವಕ್ಕಿದೆ. ಇನ್ನು ಗೊರೆಕೆ ಹೊಡೆಯುವ ಅಭ್ಯಾಸ ಉಳಿದ ಸ್ಪರ್ಧಿಗಳಿಗೆ ಆಹಾರವಾಗುವುದರಲ್ಲಿ ಸಂಶಯವಿಲ್ಲ. ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಆಗಿರುವ ಕಾರಣದಿಂದ ಕಿಚನ್ ನಲ್ಲಿ ಕಿತ್ತಾಡಲು ಟಾಪಿಕ್ ಬೇಕಾ.