ಬೆಂಗಳೂರಿನಲ್ಲಿ ಕದ್ದ ಮಾಲು ದೆಹಲಿಯಲ್ಲಿ ವಿಲೇವಾರಿ
ವಿಮಾನದಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರಿಯಾಗಿರಿಸಿ ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ಅಕ್ಬರ್ (38) ಆತನ ಪತ್ನಿ ಮುಬೀನಾ (32)ಮತ್ತು ಸೋನು ಯಾದವ್ (39) ಎಂದು ಗುರುತಿಸಲಾಗಿದೆ.ಬಂಧಿತರಿಂದ 30.50 ಲಕ್ಷ ರೂಪಾಯಿ ಮೊತ್ತದ 405 ಗ್ರಾಮ್ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ಮೇ 10ರಂದು ಎಇಸಿಎಸ್ ಲೇಔಟ್ ನಿವಾಸಿಯೊಬ್ಬರ ಮನೆಗೆ ಹಾಡಹಗಲೇ ನುಗ್ಗಿದ ಖದೀಮರು ಬೀಗ ಒಡೆದು ಆಭರಣಗಳನ್ನು ದೋಚಿದ್ದರು. ಈ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಇನ್ಸ್ಪೆಕ್ಟರ್ ಭಾಗ್ಯವತಿ ಜೆ.ಬಂಟ ಅವರ ತಂಡ ಮೊದಲಿಗೆ ಘಟನೆ ನಡೆದ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿತು. ಜೊತೆಗೆ ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕಿತು.
ಆಗ ಮನೆಗೆ ನುಗ್ಗಿದ ಕಳ್ಳನೊಬ್ಬ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇರೋದು ಗೊತ್ತಾಯ್ತು. ತಕ್ಷಣ ಮೆಜೆಸ್ಟಿಕ್ ಕಡೆಗೆ ತೆರಳಿದ ಪೊಲೀಸ್ ತಂಡ ಸೋನು ಯಾದವ್ ನನ್ನು ವಶಕ್ಕೆ ಪಡೆಯಿತು. ನಂತರ ಆತನ ವಿಚಾರಣೆ ಮಾಡಿದಾಗ ಬಾಯಿ ಬಿಡುತ್ತಾನೆ.
ಸೋನು ಬಾಯಿಬಿಟ್ಟ ಸಂಗತಿ ಆಧಾರದ ಮೇಲೆ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ಸಹಾಯದೊಂದಿದೆ ಅಕ್ಬರ್ ಮತ್ತು ಮುಬೀನಾಳನ್ನು ಗಾಜಿಯಾಬಾದ್ನಲ್ಲಿ ಬಂಧಿಸಿದ್ದಾರೆ.
ಇನ್ನು ಹೀಗೆ ಇವರು ವಿಮಾನದಲ್ಲಿ ಬಂದು ಕಳ್ಳತನ ಮಾಡೋದು ಬೆಂಗಳೂರಿನಲ್ಲಿ ಮಾತ್ರವಲ್ಲ ಮಹಾರಾಷ್ಟ್ರ, ಗುಜರಾತ್ ಸೇರಿ ವಿವಿಧ ರಾಜ್ಯಗಳಲ್ಲೂ ತಮ್ಮ ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಂಡಿರುವುದು ಗೊತ್ತಾಗಿದೆ.
2022ರಲ್ಲಿ ಬೆಂಗಳೂರು ಪೊಲೀಸರು ಇಂತಹುದೇ ತಂಡವೊಂದನ್ನು ಬಂಧಿಸಿದ್ದರು. ಪಶ್ಚಿಮ ಬಂಗಾಳದಿಂದ ವಿಮಾನದಲ್ಲಿ ಬಂದು ನಗರದಲ್ಲಿ ಕಳ್ಳತನ ಮಾಡುತ್ತಿದ್ದ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.