ಅಪಹರಣ ಮಾಡಿ 2 ಲಕ್ಷ ವಸೂಲಿಗೆ ಪ್ಲಾನ್
ತಾಯಿ-ಮಗನನ್ನು ಕಿಡ್ನ್ಯಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 9 ಜನ ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರೌಡಿ ಶೀಟರ್ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಎಂದು ಗುರುತಿಸಲಾಗಿದೆ.
ಆರೋಪಿಗಳು ಆಗಸ್ಟ್ 13 ರಂದು ಚಂದ್ರಲೇಔಟ್ ವ್ಯಾಪ್ತಿಯ 40 ವರ್ಷದ ಮಹಿಳೆ ಮತ್ತು ಆಕೆ ಪುತ್ರ 20 ಪರ್ಷದ ವರುಣ್ ನನ್ನು ಅಪಹರಿಸಿದ್ದರು. ಬಳಿಕ ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು 2 ಲಕ್ಷ ರೂಪಾಯಿ ಹಣಕ್ಕೆ ಪೀಡಿಸಿದ್ದರು. ಅವರ ಬಳಿ ಹಣ ಇಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಬಿಟ್ಟು ಕಳುಹಿಸಿದ್ದರು.
ಬಳಿಕ ಸಂತ್ರಸ್ತೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ವರುಣ್ ಮತ್ತು ಆತನ ತಾಯಿ ಕದ್ದ ಮೊಬೈಲ್, ಚಿನ್ನಾಭರಣಗಳನ್ನು ವಿಲೇವಾರಿ ಮಾಡುತ್ತಿದ್ರು. ಶಕ್ತಿ ಮತ್ತು ಬಸವರಾಜು ಕದ್ದ ವಸ್ತುಗಳನ್ನು ವರುಣ್ ಗೆ ನೀಡುತ್ತಿದ್ದರು. ವರುಣ್ ತನ್ನ ತಾಯಿಯ ಮೂಲಕ ಈ ವಸ್ತುಗಳನ್ನು ವಿಲೇವಾರಿ ಮಾಡುತ್ತಿದ್ದ. ಈ ವಿಚಾರ ತಿಳಿದುಕೊಂಡಿದ್ದ ರೌಡಿ ಶೀಟರ್ಗಳಾದ ಜೋಸೆಫ್, ಪಾಗಲ್ ಸೀನ ವರುಣ್ ಮತ್ತು ಆತನ ತಾಯಿಯಿಂದ 2 ಲಕ್ಷ ವಸೂಲಿ ಮಾಡಲು ಪ್ಲಾನ್ ಮಾಡಿದ್ದರು.
ಅದರಂತೆ ತಾಯಿ ಮಗನನ್ನು ಅಪಹರಿಸಿ ಸೌಮ್ಯ ಮತ್ತು ಪ್ರತಾಪ್ ಮನೆಯಲ್ಲಿ ಇರಿಸಿದ್ದರು. ಇವರಿಬ್ಬರೂ ಕೆಂಗೇರಿ ಸಮೀಪ ಉಪಹಾರ ಗೃಹವೊಂದನ್ನು ನಡೆಸುತ್ತಿದ್ದರು. ಜೊತೆಗೆ ಹಣಕಾಸು ವ್ಯವಹಾರವೂ ಇತ್ತು.
ಅಪಹರಣದ ನಂತರ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.