ದೇವನಹಳ್ಳಿಯಲ್ಲಿ 6, ದೊಡ್ಡಬಳ್ಳಾಪುರ 9, ಹೊಸಕೋಟೆಯಲ್ಲಿ 1 ಬಾಲ್ಯವಿವಾಹ ಪ್ರಕರಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರಡಿ ಒಟ್ಟು 16 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ದೇವನಹಳ್ಳಿಯಲ್ಲಿ 6, ದೊಡ್ಡಬಳ್ಳಾಪುರ 9, ಹೊಸಕೋಟೆಯಲ್ಲಿ 1 ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲಾಗಿದೆ.
ಜಿಲ್ಲೆಯ ಪ್ರತಿ ಮನೆಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಾನೂನುಗಳ ಕರಪತ್ರವನ್ನು ಹಂಚುವ ಮೂಲಕ ಬಾಲ್ಯ ವಿವಾಹ ನಿಷೇಧ ಕುರಿತಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದ ಭಾಗವಾಗಿರುವ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ವೇಳೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೋಷಣ್ ಅಭಿಯಾನದಡಿ ಪೌಷ್ಠಿಕ ಆಹಾರ ನೀಡಿ ಅವರನ್ನು ಸದೃಢರನ್ನಾಗಿಸಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯನ್ನು ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.