ಮಳೆ ನೆರೆ ಬಂದರೆ ಸಾಕು ಕಾಸು ಮಾಡುವ ಮಂದಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ. ಎಲ್ಲಿಯ ಮಟ್ಟಿಗೆ ಅಂದರೆ ನಿಜವಾಗಿಯೂ ಸಹಾಯ ಮನೋಭಾವನೆ ಹೊಂದಿರುವ ಮಂದಿಯನ್ನು ಸಂಶಯದಿಂದ ನೋಡಿಕೊಳ್ಳುವಷ್ಟರ ಮಟ್ಟಿಗೆ ಇವರು ಬೆಳೆದಿರುತ್ತಾರೆ.
ಕೊಡಗು ಕೇರಳ ನೆರೆ ವಿಷಯದಲ್ಲೂ ಹೀಗೆ ಆಗಿದೆ. ದೇವರನಾಡಿನಲ್ಲಿ ನೆರೆ ಬಂದಿದೆ, ಕೊಡಗು ಮುಳುಗಿ ಹೋಗಿದೆ ಸಹಾಯ ಮಾಡಿ ಎಂದು ನೂರಾರು ಮಂದಿ ಚಂದಾ ಎತ್ತುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು ಸಹಾಯ ಮಾಡುವ ಮಂದಿಯೇ ಎಂದು ಅನುಮಾನದಿಂದ ನೋಡುವಂತ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಯಾವ ಸಂಘಟನೆಯವರನ್ನು ನಂಬಲಿ, ಯಾರಿಗೆ ಕೊಟ್ಟರೆ ಸಂತ್ರಸ್ಥರಿಗೆ ತಲುಪುತ್ತದೆ ಅನ್ನುವುದೇ ಗೊತ್ತಾಗುತ್ತಿಲ್ಲ.
ಇದಕ್ಕೆ ಕಾರಣವಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕೊಟ್ಟ ಹೇಳಿಕೆ. ಸಂತ್ರಸ್ಥರ ಹೆಸರಿನಲ್ಲಿ ಚಂದಾ ಎತ್ತುವ ನಕಲಿ ಮಂದಿ ಹುಟ್ಟಿಕೊಂಡಿದ್ದಾರೆ. ದಯವಿಟ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಾಸು ಕೊಡಿ ಎಂದು ಅವರು ಸಾಕಷ್ಟು ದಿನಗಳ ಹಿಂದೆ ಹೇಳಿದ್ದರು.
ಇದಕ್ಕೆ ಪುಷ್ಟಿ ನೀಡುವಂತೆ ನಟ ಯಶ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
ಯಶೋಮಾರ್ಗ ಸಂಸ್ಥೆಯ ಹೆಸರು ಹೇಳಿಕೊಂಡು ಕೊಡಗು ಮಹಾಮಳೆಯ ಸಂತ್ರಸ್ಥರಿಗೆ ಕೆಲವರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದು ನಟ ಯಶ್ ಗಮನಕ್ಕೂ ಬಂದಿದ್ದು, “ಯಶೋಮಾರ್ಗದ ಹೆಸರು ಹೇಳಿಕೊಂಡು ಬರುವವರಿಗೆ ದೇಣಿಗೆ ಕೊಡಬೇಡಿ” ಎಂದು ಅವರೇ ಮನವಿ ಮಾಡಿದ್ದಾರೆ.
‘ಯಶೋಮಾರ್ಗ’ ಸಂಸ್ಥೆಯ ಮೂಲಕ ನನ್ನ ಸ್ವಂತ ಸಂಪಾದನೆಯ ಹಣದಲ್ಲಿ ನನ್ನ ಆತ್ಮ ತೃಪ್ತಿಗಾಗಿ ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಯಾವುದೇ ದೇಣಿಗೆ/ವಂತಿಗೆಯನ್ನು ಜನರಿಂದ ಸ್ವೀಕರಿಸುತ್ತಿಲ್ಲ.
ಆದರೆ, ಇತ್ತೀಚೆಗೆ ಭಾರಿ ಮಳೆಯಿಂದಾಗಿ ನಿರಾಶ್ರಿತರಾದ ಕೊಡಗಿನ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಯಶೋಮಾರ್ಗದ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕಾಗಿ ಯಶೋಮಾರ್ಗದ ಹೆಸರನ್ನು ಬಳಸಬಾರದೆಂದು ವಿನಂತಿಸುತ್ತೇನೆ.
ಸಾರ್ವಜನಿಕರ ನೆರವು ಯಶೋಮಾರ್ಗಕ್ಕೆ ಅವಶ್ಯವೆನಿಸುವ ಸಂದರ್ಭದಲ್ಲಿ ನಾನೇ ಖುದ್ದು ನಿಮ್ಮ ಮುಂದೆ ಬರುತ್ತೇನೆ. ಸಧ್ಯಕ್ಕೆ ಯಶೋಮಾರ್ಗದ ಹೆಸರಿನಲ್ಲಿ ದೇಣಿಗೆ ಕೇಳಲು ಬಂದವರಿಗೆ ದೇಣಿಗೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ.
ಅಲ್ಲಿಗೆ ಯಶ್ ಮತ್ತು ಕೊಡಗು ಹೆಸರಿನಲ್ಲಿ ದುಷ್ಕರ್ಮಿಗಳು ಭರ್ಜರಿ ಫಸಲು ಮಾಡುತ್ತಿದ್ದಾರೆ ಅಂದಾಯ್ತು. ನಿಮಗೇನಾದರೂ ಯಶ್ ಹೆಸರಿನಲ್ಲಿ ಚಂದಾ ಎತ್ತುವವರು ಕಂಡು ಬಂದರೆ ಕತ್ತಿನ ಪಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿ.
Discussion about this post