ಬೆಂಗಳೂರು : ವೃದ್ಧಾಶ್ರಮದಲ್ಲಿದ್ದ ವೃದ್ಧೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಊಟಜ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆ ಸಂಬಂಧ ಉಸಿರು ಫೌಂಡೇಷನ್ ಮುಖ್ಯಸ್ಥ ಸೇರಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಕಮಲಮ್ಮ (82) ಎಂದು ಗುರುತಿಸಲಾಗಿದೆ.
ಹಳೆ ಮದ್ರಸಾ ರಸ್ತೆಯ ಭಟ್ಟರಹಳ್ಳಿಯ ನಿವಾಸಿ ಕಮಲಮ್ಮ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಸಲುವಾಗಿ ಕಮಲಮ್ಮ ಪುತ್ರ ತಾಯಿಯನ್ನು ನಾಗರಬಾವಿಯಲ್ಲಿರುವ ಉಸಿರು ಫೌಂಡೇಷನ್ ಗೆ ದಾಖಲಿಸಿದ್ದರು. ಇದಕ್ಕಾಗಿ ಪ್ರತೀ ತಿಂಗಳು 10 ಸಾವಿರ ರೂಪಾಯಿ ಹಣವನ್ನು ಪಾವತಿಸುತ್ತಿದ್ದರು.
ಈ ನಡುವೆ ಕಮಲಮ್ಮನ ಪುತ್ರ ರಾಮಚಂದ್ರನಿಗೆ ಕರೆ ಮಾಡಿದ ಫೌಂಡೇಷನ್ ಸಿಬ್ಬಂದಿ, ನಿಮ್ಮ ತಾಯಿಗೆ ಉಸಿರಾಟದ ತೊಂದರೆಯಾಗಿದೆ, ಬೇಗ ಬನ್ನಿ ಎಂದು ಸೂಚಿಸಿದ್ದಾರೆ. ರಾಮಚಂದ್ರ ಬಂದು ನೋಡಿದಾಗ ಕೊಠಡಿಯಲ್ಲಿ ರಕ್ತದ ಕಲೆಗಳು ಕಂಡು ಬಂದಿದೆ. ತಾಯಿ ಎಲ್ಲಿದ್ದಾರೆ ಎಂದು ವಿಚಾರಿಸಿದಾಗ ಅಂಬ್ಯುಲೆನ್ಸ್ ನಲ್ಲಿ ಶವ ತೋರಿಸಿದ್ದಾರೆ. ಆಗ ಅನುಮಾನಗೊಂಡ ರಾಮಚಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡ ವೇಳೆ ಹೊರ ಬಿದ್ದಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ವೃದ್ಧಾಶ್ರಮದ ಹೆಸರಿನಲ್ಲಿ ನಡೆದ ದಂಧೆ.
ಉಸಿರು ಫೌಂಡೇಷನ್ ನ ಯೋಗೇಶ್ ನಾಗರಬಾವಿಯಲ್ಲಿ ಸುಸಜ್ಜಿತ ವೃದ್ಧಾಶ್ರಮ ನಿರ್ಮಿಸಿಕೊಂಡಿದ್ದ. ಜೊತೆಗೆ ಕಂಠೀರವ ಸ್ಟುಡಿಯೋ ಬಳಿ ಮತ್ತೊಂದು ಶಾಖೆಯನ್ನು ತೆರೆದಿದ್ದ. ನಾಗರಬಾವಿಯ ಹೈಟೆಕ್ ಆಗಿದ್ರೆ, ಕಂಠೀರವ ಸ್ಟೇಡಿಯಂನ ಶಾಖೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ.
ಯಾರಾದರೂ ವೃದ್ಧಾಶ್ರಾಮ ಬೇಕು ಎಂದು ಕರೆ ಮಾಡಿದರೆ, ನಾಗರಬಾವಿಗೆ ಕರೆಸುತ್ತಿದ್ದ. ಜೊತೆಗೆ ತಿಂಗಳಿಗೆ 30 ರಿಂದ 40 ಸಾವಿರ ಬಿಲ್ ಮಾಡುತ್ತಿದ್ದ. ಇನ್ನು ಹೆಚ್ಚು ಕಾಯಿಲೆ ಅಥವಾ ಗಲಾಟೆ ಮಾಡುವ ವೃದ್ಧರನ್ನು ಕಂಠೀರವ ಸ್ಟೇಡಿಯಂನ ಶಾಖೆಗೆ ಸ್ಥಳಾಂತರಿಸಿ, ಅಲ್ಲಿ ಸೆಲ್ಲರ್ ನಲ್ಲಿ ಕೂಡಿ ಹಾಕುತ್ತಿದ್ದ. ಜೊತೆಗೆ ಎರಡು ದಿನಕ್ಕೊಮ್ಮೆ ಊಟ ನೀಡುತ್ತಿದ್ದ. ವೃದ್ಧರನ್ನು ನೋಡಲು ಬರುವುದಾಗಿ ಕುಟುಂಬಸ್ಥರು ತಿಳಿಸಿದರೆ, ತಕ್ಷಣ ಸ್ವಚ್ಛ ಮಾಡಿ 1 ನೇ ಮಹಡಿಗೆ ಕರೆಸಿ ಭೇಟಿ ಮಾಡಿಸುತ್ತಿದ್ದ.
ಹೀಗೆ ಕಮಲಮ್ಮ ಅವರನ್ನು ಸೆಲ್ಲರ್ ನಲ್ಲಿ ಕೂಡಿ ಹಾಕಲಾಗಿತ್ತು. ಆಗಸ್ಟ್ 7 ರಂದು ಕಮಲಮ್ಮ ಅವರ ಮೇಲೆ ವಸಂತಮ್ಮ ಅನ್ನುವ ಮತ್ತೊಬ್ಬ ವೃದ್ಧೆ ಊಟ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ್ದರು. ಚೇರ್ ನಿಂದ ಹಲ್ಲೆ ನಡೆದ ಕಾರಣ ತೀವ್ರ ರಕ್ತಸ್ರಾವವಾಗಿ ಕಮಲಮ್ಮ ಮೃತಪಟ್ಟಿದ್ದರು.ಬಳಿಕ ಸಾವಿನ ಸುದ್ದಿ ಮುಚ್ಚಿಡುವ ಸಲುವಾಗಿ 1 ಮಹಡಿಗೆ ಶವ ಸಾಗಿಸಿ, ಬಟ್ಟೆ ಬದಲಿಸಿ, ರಕ್ತದ ಕಲೆಗಳನ್ನು ಸ್ವಚ್ಛ ಮಾಡಿ ಬಳಿಕ ಮಗನಿಗೆ ಕರೆ ಮಾಡಿದ್ದರು.
ಇದೀಗ ಆರ್ ಎಂ ಸಿ ಯಾರ್ಡ್ ಪೊಲೀಸರು ಉಸಿರು ಫೌಂಡೇಷನ್ ಮುಖ್ಯಸ್ಥ ಯೋಗೇಶ್, ನೌಕರರಾದ ಭಾಸ್ಕರ್, ಪ್ರೇಮಾ, ಮಂಜುನಾಥ್ ಹಾಗೂ ಕೊಲೆ ಮಾಡಿದ ವಸಂತಮ್ಮ ಅವರನ್ನು ಬಂಧಿಸಿದ್ದಾರೆ.
Discussion about this post