ಬೆಂಗಳೂರು : ಕರ್ನಾಟಕದಲ್ಲಿ ಡ್ರಗ್ಸ್ ದಂಧೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಇನ್ನಿಲ್ಲದಂತೆ ಹರಸಾಹಸ ಪಡುತ್ತಿದ್ದಾರೆ. ದುರಂತ ಅಂದ್ರೆ ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕ್ರಿಮಿನಲ್ ಗಳಾಗುತ್ತಿದ್ದಾರೆ. ಮಾತ್ರವಲ್ಲದೆ ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಇಲಾಖೆ ಅನ್ನುವ ಕುಖ್ಯಾತಿಗೂ ಪೊಲೀಸ್ ಇಲಾಖೆ ಪಾತ್ರವಾಗಿದೆ. ಈ ಕಾರಣದಿಂದ ನಿಷ್ಠಾವಂತ ಅಧಿಕಾರಿಗಳೂ ತಲೆ ತಗ್ಗಿಸುವಂತಾಗಿದೆ.
ಈ ನಡುವೆ ಆರಕ್ಷಕರೇ ಭಕ್ಷಕರಾಗುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿರುವ ಆರ್ ಟಿ ನಗರ ಪೊಲೀಸರು, ಸಿಎಂ ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರನ್ನೇ ಬಂಧಿಸಿದ್ದಾರೆ.
ಜನವರಿ 13 ರ ಮುಂಜಾನೆ 5 ಗಂಟೆ ಸುಮಾರಿಗೆ ಆರ್ ಟಿ ನಗರದಲ್ಲಿ ಆಟೋ ಒಂದು ಅನುಮಾನಸ್ಪದವಾಗಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು RT Nagara ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಟೋ ತಡೆದು ಅದರಲ್ಲಿ ಇದ್ದವರನ್ನು ವಶಕ್ಕೆ ಪಡದರೆ, ಅದರಲ್ಲಿ ಇದ್ದವರು ಪೊಲೀಸ್ ಪೇದೆಗಳು ಎಂದು ಗೊತ್ತಾಗಿದೆ.ಈ ವೇಳೆ ಅರ್ಧ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಅಂದ ಹಾಗೇ ಬಂಧಿಸಲ್ಪಟ್ಟಿರುವ ಪೊಲೀಸರಾದ ಶಿವಕುಮಾರ್ ಮತ್ತು ಸಂತೋಷ್ ಕೋರಮಂಗಲ ಠಾಣೆಯಲ್ಲಿ ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ದಂಧೆಯನ್ನು ಸುಲಲಿತವಾಗಿ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನಿವಾಸದ ಭದ್ರತೆಗೆ ನಿಯೋಜಿಸಲ್ಪಟ್ಟಿಕೊಂಡಿದ್ದರು. ಬಸವರಾಜ ಬೊಮ್ಮಾಯಿಯವರ ಖಾಸಗಿ ನಿವಾಸದಲ್ಲಿ ಭದ್ರತೆ ಕಾರ್ಯ ನೋಡಿಕೊಳ್ಳುತ್ತಿದ್ದ ಈ ಪೇದೆಗಳು ಪೆಡ್ಲರ್ ಗಳಿಂದ ಮಾದಕ ವಸ್ತು ಖರೀದಿಸಿ ಫುಡ್ ಡೆಲಿವರಿ ಬಾಯ್ ಗಳ ಮೂಲಕ ಮಾದಕ ವಸ್ತು ಡೆಲಿವರಿ ಮಾಡಿಸುತ್ತಿದ್ದರು ಎಂದು ಗೊತ್ತಾಗಿದೆ.
Discussion about this post