ಪುಣೆ : ಪೊಲೀಸರ ವೇಷದಲ್ಲಿ ಬಸ್ ನಿಲ್ಲಿಸಿದ ಖದೀಮರು 1.2 ಕೋಟಿ ಹಣ ದೋಚಿದ ಘಟನೆ ಪುಣೆಯ ಪತಾಸ್ ನಲ್ಲಿ ನಡೆದಿದೆ. ದರೋಡೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಕಾಸು ಕಳೆದುಕೊಂಡ ಕೊರಿಯರ್ ಸಂಸ್ಥೆ ತಲೆ ಮೇಲೆ ಕೈ ಹೊತ್ತು ಕೂತಿದೆ.
ಕೊರಿಯರ್ ಸಂಸ್ಥೆಯ ಸಿಬ್ಬಂದಿ ಸರ್ಕಾರಿ ಬಸ್ ನಲ್ಲಿ ದೊಡ್ಡ ಮೊತ್ತದ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಖಚಿತ ಮಾಹಿತಿ ಪಡೆದಿದ್ದ ದುಷ್ಕರ್ಮಿಗಳು ಪೊಲೀಸರ ವೇಷದಲ್ಲಿ ಕಾಡಿನ ರಸ್ತೆಯಲ್ಲಿ ಕಾದು ಕುಳಿತಿದ್ದಾರೆ. ಬಸ್ ಬರುತ್ತಿದ್ದಂತೆ ಕೈ ಅಡ್ಡ ಹಾಕಿದ್ದಾರೆ. ಈ ವೇಳೆ ಪೊಲೀಸರೇ ಕೈ ಅಡ್ಡ ಮಾಡಿದ ಮೇಲೆ ಬಸ್ ನಿಲ್ಲಿಸದಿದ್ರೆ ಹೇಗೆ ಎಂದು ಬಸ್ ಚಾಲಕ ಬ್ರೇಕ್ ಅದುಮಿದ್ದಾನೆ.
ಕೊರಿಯರ್ ಸಂಸ್ಥೆಯ ನಾಲ್ವರು ಸಿಬ್ಬಂದಿ ಮಂಗಳವಾರ Nilanga to Bhiwandi ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ 1.15ರ ಸುಮಾರಿಗೆ ಪೊಲೀಸ್ ವೇಷಧಾರಿಗಳು ಬಸ್ ತಡೆದಿದ್ದಾರೆ. ಬಳಿಕ ಬಸ್ ಪ್ರವೇಶಿಸಿದ ಮೂವರು, ಕೊರಿಯರ್ ಹುಡುಗರನ್ನು ಬೆದರಿಸಿದ್ದಾರೆ. ಅಕ್ರಮವಾಗಿ ನೀವು ಹಣ ಸಾಗಾಟ ಮಾಡುತ್ತಿದ್ದು, ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ. ಕೊರಿಯರ್ ಸಿಬ್ಬಂದಿ ಕೆಳಗೆ ಇಳಿಯುತ್ತಿದ್ದಂತೆ ಹಣದ ಬ್ಯಾಗ್ ಕಸಿದು ಬೈಕ್ ಹತ್ತಿ ಖದೀಮರು ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
Discussion about this post