ಚಿಕ್ಕಮಗಳೂರು : ಪೆಟ್ರೋಲ್ ಡೀಸೆಲ್ ಲಾರಿ ಮಗುಚಿ ಬಿದ್ರೆ ಸಾಕು ಸಂಭಾವ್ಯ ಅಪಾಯವನ್ನು ಲೆಕ್ಕಿಸದೇ ಜನ ತಟ್ಟೆ ಲೋಟ ಹಿಡಿದು ಧಾವಿಸುತ್ತಾರೆ. ಬೆಂಕಿಯ ಒಂದು ಕಿಡಿ ತಾಗಿದರೆ ಭಸ್ಮವಾಗುತ್ತೇವೆ ಎಂದು ಗೊತ್ತಿದ್ದರೂ ಬಕೆಟ್, ಕೊಡಪಾನಗಳಲ್ಲಿ ತುಂಬಿಸುತ್ತಾರೆ.
ಇನ್ನು ಕೋಳಿ ತುಂಬಿದ ಲಾರಿ ಮಗುಚಿ ಬಿದ್ರೆ ಚಾಲಕ ಹೇಗಿದ್ದಾನೆ ಅನ್ನುವುದನ್ನೂ ಜನ ನೋಡೋದಿಲ್ಲ. ಮನೆಗೊಂದು, ಚಿಕ್ಕಮನ ಮನೆಗೊಂದು, ದೊಡ್ಡಮ್ಮನ ಮನೆಗೊಂದು ಎಂದು ಜನ ಕೋಳಿ ಹೊತ್ತೊಯ್ಯುತ್ತಾರೆ.
ಹಾಗೇ ಚಿಕ್ಕಮಗಳೂರಿನಲ್ಲಿ ಮದ್ಯದ ಬಾಟಲಿ ತುಂಬಿದ ಲಾರಿ ಮಗುಚಿ ಬಿದ್ದ ಸುದ್ದಿ ಕೇಳಿ ಜನ ಎಲ್ಲಿ ಲಾಕ್ ಡೌನ್ ಆಗಿ ಬಿಡುತ್ತದೋ, ಬಿಟ್ಟಿ ಎಣ್ಣೆ ಸಿಕ್ರೆ ಬಿಡುವುದುಂಟೇ ಎಂದು ಹೊತ್ತೊಯ್ದಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಮದ್ಯ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿಯಲ್ಲಿದ್ದ ಮದ್ಯದ ಬಾಟಲಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದೆ. ಅಪಘಾತ ನಡೆದ ಕೆಲವೇ ಕ್ಷಣಗಳಲ್ಲಿ ಸೇರಿದ ಜನ ಕೊರೋನಾ ಅನ್ನುವ ಮಹಾಮಾರಿ ಇದೆ ಅನ್ನುವುದನ್ನು ಮರೆತು ಲಾರಿಯೇರಿ ಮದ್ಯದ ಬಾಟಿ ತೆಗೆದುಕೊಂಡು ಹೋಗಿದ್ದಾರೆ.
ಇನ್ನು ಅಪಘಾತದ ಸುದ್ದಿ ಕೇಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ರೆ ಬೆಂಗಳೂರಿನಿಂದ ತುಂಬಿಸಿಕೊಂಡು ಬಂದಿದ್ದ ಮದ್ಯದ ಪೈಕಿ ಅರ್ಧ ಪಾಲು ಎಂ.ಸಿ. ಹಳ್ಳಿ ಮನೆ ಸೇರಿಕೊಂಡಿತ್ತು. ಕೊನೆಗೆ ಲಘುವಾಗಿ ಲಾಠಿ ಬೀಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.
Discussion about this post