ಬೆಂಗಳೂರು : ಮೊನ್ನೆ ಮೊನ್ನೆ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಕುಡಿಯಬೇಡ ಎಂದು ಬುದ್ದಿ ಮಾತು ಹೇಳಿದ ಫ್ಲ್ಯಾಟ್ ಮಾಲೀಕನನ್ನೇ ಕೊಲೆ ಮಾಡಿದ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ನೇಪಾಳಿ ಮೂಲದ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ ಲಕ್ಷ ಲಕ್ಷ ನಗದು ಮತ್ತು ಲಕ್ಷ ಲಕ್ಷ ಮೊತ್ತದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾನೆ.
ಕಮ್ಮನಹಳ್ಳಿ ನಿವಾಸಿ ಶ್ರೀಧರ್ ನವೆಂಬರ್ 15 ರಂದು ಪರಿಚಿತರದ ಮದುವೆಗೆ ಅಂತಾ ಅರಮನೆ ಮೈದಾನಕ್ಕೆ ಬಂದಿದ್ದರು. ಮನೆಯಲ್ಲಿದ್ದ ಶ್ರೀಧರ್ ಪತ್ನಿ ಹಾಗೂ ಹೆಣ್ಣು ಮಕ್ಕಳು ಸಂಬಂಧಿಕರ ನಿಶ್ಚಿತಾರ್ಥಕ್ಕೆ ಅಂತಾ ವೈಟ್ ಫೀಲ್ಡ್ ಗೆ ಹೋಗಿದ್ದರು. ಶ್ರೀಧರ್ ಪತ್ನಿ ಮನೆ ಬಿಡುವ ಮುನ್ನ ಮನೆಗೆ ಬೀಗ ಹಾಕಲು ಮುಂದಾಗಿದ್ದಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕೃಷ್ಣ ಪತ್ನಿ ಜಾನಕಿ ಮನೆ ಕೆಲಸ ಬಾಕಿ ಇದೆ ಅಂದಿದ್ದಾಳೆ. ಹೀಗಾಗಿ ನಗ ನಗದು ಇರುವ ಕೋಣೆಗೆ ಬೀಗ ಹಾಕಿ ಮನೆ ಮಾಲಕಿ ತೆರಳಿದ್ದಾರೆ.
ಮಧ್ಯಾಹ್ನ ಮದುವೆ ಮುಗಿಸಿ ಶ್ರೀಧರ್ ಮನೆಗೆ ಬಂದ್ರೆ ಎರಡನೇ ಮಹಡಿಯ ಮಲಗುವ ಕೋಣೆಯ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ಕೋಣೆಗೆ ಹೋಗಿ ನೋಡಿದರೆ 47 ಲಕ್ಷ ನಗದು ಮತ್ತು 170 ಗ್ರಾಮ ಚಿನ್ನ ಕಳುವಾಗಿತ್ತು. ತಕ್ಷಣ ಸೆಕ್ಯೂರಿಟಿ ಗಾರ್ಡ್ ಗಾಗಿ ಹುಡುಕಾಡಿದ್ರೆ, ಪತ್ನಿಯೊಂದಿಗೆ ಆತ ನಾಪತ್ತೆಯಾಗಿದ್ದ. ಹೋಗ್ಲಿ ಸಿಸಿಟಿವಿಯಾದ್ರೂ ನೋಡೋಣ ಅಂದ್ರೆ ಎಲ್ಲಾ ಸಿಸಿಟಿವಿಗಳನ್ನು ಆಫ್ ಮಾಡಿಯೇ ಅವರು ಕಳ್ಳತನ ಮಾಡಿದ್ದರು.
ಕೇವಲ ಗಂಡ ಹೆಂಡತಿ ಮಾತ್ರ ಸೇರಿ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ, ಬದಲಾಗಿ ಇವರ ಗ್ಯಾಂಗ್ ದೊಡ್ಡದಾಗಿದೆ ಅನ್ನುವುದೇ ಅನುಮಾನ.
Discussion about this post