ಬೆಂಗಳೂರು : ಸರ್ಕಾರಿ ಆಸ್ಪತ್ರೆಯಲ್ಲಿ ವರ್ಷಗಳ ಹಿಂದೆ ನಡೆದಿದ್ದ ಮಗು ಕಳ್ಳತನದ ಬೆನ್ನು ಹತ್ತಿದ್ದ ಬಸವನಗುಡಿ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತ ಅಂದ್ರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಮಗು ಕಳ್ಳಿ ವೃತ್ತಿಯಲ್ಲಿ ವೈದ್ಯಯಾಗಿದ್ದಾಳೆ.
2020ರ ಮೇ 29 ರಂದು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗುವೊಂದು ಕಳ್ಳತನವಾಗಿತ್ತು. ಈ ವೇಳೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ ಮಗು ಕದ್ದ ಮಹಿಳೆಯ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಪ್ರಕರಣದ ಕಡತ ಮುಚ್ಚಿರಲಿಲ್ಲ.
ಇದೀಗ ಪೊಲೀಸರ ಕಾರ್ಯಾಚರಣೆ ಫಲ ನೀಡಿದ್ದು, ಕೃತ್ಯ ನಡೆದ ಒಂದು ವರ್ಷ ಎರಡು ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತೆಯನ್ನು ಮನೋ ವೈದ್ಯ ರಶ್ಮಿ ಎಂದು ಗುರುತಿಸಲಾಗಿದೆ.
2014ರಲ್ಲಿ ಹುಬ್ಬಳ್ಳಿಯ ಎಸ್.ಡಿಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿಗೆ ಕೊಪ್ಪಳ ಮೂಲಕ ದಂಪತಿಯ ಪರಿಚಯವಾಗಿತ್ತು. ಆ ದಂಪತಿಗೆ ವಿಶೇಷ ಚೇತನದ ಮಗುವೊಂದಿತ್ತು. ಮಗುವಿನ ಚಿಕಿತ್ಸೆಗಾಗಿ ರಶ್ಮಿ ಬಳಿ ದಂಪತಿ ಬರುತ್ತಿದ್ದ ಕಾರಣ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಮತ್ತೊಂದು ಮಗುವಿಗಾಗಿ ಪ್ರಯತ್ನಿಸುತ್ತಿದ್ದ ವಿಚಾರ ತಿಳಿದ ರಶ್ಮಿ, ನಿಮ್ಮ ಅಂಡಾಣು ಮತ್ತು ವೀರ್ಯಾಣುವನ್ನು ಅಪರಿಚಿತ ಮಹಿಳೆಯ ಗರ್ಭದಲ್ಲಿ ಸೇರಿಸುತ್ತೇವೆ. ಬೇರೊಂದು ಮಹಿಳೆಯ ಗರ್ಭದಲ್ಲಿ ನಿಮ್ಮದೇ ಮಗು ಬೆಳೆಯಲಿದೆ ಎಂದು ದೊಡ್ಡ ಮೊತ್ತದ ಕಾಸು ಪೀಕಿಸಿದ್ದಳು.
ಡಾ.ರಶ್ಮಿಯ ಮಾತು ನಂಬಿದ್ದ ದಂಪತಿ, ಅಂಡಾಣು ಮತ್ತು ವೀರ್ಯಾಣು ಜೊತೆಗೆ ಕಾಸು ಕೂಡಾ ಕೊಟ್ಟಿದ್ದರು. 2019ರಲ್ಲಿ ಈ ವ್ಯವಹಾರ ನಡೆದಿತ್ತು. ಆದರೆ ತಾನು ಕಲೆಕ್ಟ್ ಮಾಡಿದ್ದ ಅಂಡಾಣು, ವೀರ್ಯಾಣುವನ್ನು ಬಳಸದ ರಶ್ಮಿ ಸಿಕ್ಕ ಕಾಸಿನಲ್ಲಿ ಮಜಾ ಉಡಾಯಿಸಿದ್ದಳು.
ಕೊನೆಗೆ ಮಗು ಕೊಡಬೇಕಾದ ಪರಿಸ್ಥಿತಿ ಬಂದಾಗ, ಹೊಳೆದಿದ್ದು ಮಗು ಕಳ್ಳತನದ ಐಡಿಯಾ. ಹೀಗಾಗಿ 2020ರ ಮೇ 29 ರಂದು ಚಾಮರಾಜಪೇಯೆ ಹೆರಿಗೆ ಆಸ್ಪತ್ರೆಗೆ ನುಗ್ಗಿ, ಮಗುವನ್ನು ಕದ್ದು ದಂಪತಿಯ ಕೈಗಿಟ್ಟಿದ್ದಳು. ಈ ವೇಳೆ 15 ಲಕ್ಷದ ಡೀಲ್ ನ ಫೈನಲ್ ಸೆಟಲ್ಮೆಂಟ್ ಕೂಡಾ ನಡೆದಿತ್ತು.
ಮಗು ಕಳೆದುಕೊಂಡವರಿಗೆ ಮಗು ಸಿಗುತ್ತಾ…?
2020ರ ಮೇ 29 ರಂದು ಪಾದರಾಯನಪುರ ಮೊದಲ ಕ್ರಾಸ್ ನಿವಾಸಿಯಾದ ಹುಸ್ನಾ ಬಾನು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಹುಸ್ನಾ ಪತಿ ನಮೀದ್ ಪಾಷಾರ ಸಹೋದರ ಅಕ್ಮಲ್ ಖಾನ್ ತಮ್ಮ ಪತ್ನಿ ನೀಲೂಫರ್ ಅವರಿಗೆ ಮಾಹಿತಿ ನೀಡಿದರು. ಆಜಾದ್ ನಗರ ಟೋಲ್ ಗೇಟ್ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀಲೂಫರ್ ಅವರು ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು. ಅದರಂತೆ ಬೆಳಗ್ಗೆ 9 ಗಂಟೆಗೆ ಬಾನು ಅವರಿಗೆ ನಾರ್ಮಲ್ ಹೆರಿಗೆಯಾಗಿತ್ತು.
ಬೇರೆ ವಾರ್ಡ್ಗಳು ಭರ್ತಿಯಾಗಿದ್ದ ಕಾರಣ ಬಾನು ಅವರನ್ನು ಖಾಲಿ ವಾರ್ಡ್ ಒಂದಕ್ಕೆ ಸ್ಥಳಾಂತರಿಸಲಾಗಿತ್ತು. ಈ ವಾರ್ಡ್ನ ಬಾಗಿಲುಗಳು ತೆರೆದಿದ್ದವು. ಬಾನು ಅವರ ಪತಿ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರ ಸಹೋದರ ಅಕ್ಮಲ್ ತನ್ನ ಪತ್ನಿಯನ್ನು ಮನೆಗೆ ಬಿಟ್ಟು ಬರಲು ತೆರಳಿದ್ದರು.
ಬಾನು ಅವರು ನಿದ್ರಿಸುತ್ತಿದ್ದಾಗ ಆಸ್ಪತ್ರೆಗೆ ಪ್ರವೇಶಿಸಿದ ಮಹಿಳೆಯೊಬ್ಬಳು ಮಗುವನ್ನು ಕಳ್ಳತನ ಮಾಡಿ ಹಿಂಬಾಗಿಲಿನಿಂದ ಹೊರ ಹೋಗಿದ್ದಾಳೆ. ಬಾನು ಅವರಿಗೆ ಎಚ್ಚರವಾದಾಗ ಮಗು ಅವರ ಪಕ್ಕದಲ್ಲಿ ಇರಲಿಲ್ಲ.
ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಮಹಿಳೆಯೊಬ್ಬರು ಮಗುವನ್ನು ಹಿಡಿದುಕೊಂಡು ಆಟೋದಲ್ಲಿ ತೆರಳುತ್ತಿರೋದು ಗೊತ್ತಾಗಿತ್ತು. ದುರಂತ ಅಂದ್ರೆ ಅಕ್ಮಲ್ ಅವರ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಡೆಗೆ ಆಟೋ ತೆರಳಿದ್ದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅಕ್ಮಲ್ ಹಾಗೂ ಅವರ ಪತ್ನಿಯನ್ನೇ ಮೊದಲು ವಿಚಾರಣೆಗೆ ಒಳಪಡಿಸಿದ್ದರೆ. ಕೊನೆಗೆ ಅವರ ಪಾತ್ರವಿಲ್ಲ ಎಂದು ಗೊತ್ತಾಗಿತ್ತು.
ಇದೀಗ ಮಗು ಸಿಕ್ಕಿರುವ ಕುರಿತಂತೆ ಹುಸ್ನಾ ಬಾನು ಮತ್ತು ನಮೀದ್ ಪಾಷಾ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಮಗು ನಮಗೆ ಈಗ್ಲೇ ಕೊಡೋದಿಲ್ಲವಂತೆ, ನಮ್ದೇ ಮಗು ಎಂದು ದೃಢಪಡಬೇಕಂತೆ. ಅದಕ್ಕೆ ಹತ್ತಾರು ಟೆಸ್ಟ್ ಗಳು ನಡೆಯಬೇಕಿದೆ ಎಂದು ಬೇಸರವನ್ನೂ ಹೊರ ಹಾಕಿದ್ದಾರೆ.
Discussion about this post