ಬೆಂಗಳೂರು : ಕೊರೋನಾ ಸೋಂಕಿನ ಕಾರಣದಿಂದ ಕಾನೂನು ಸುವ್ಯವಸ್ಥೆ ಕಡೆಗೆ ಕಟ್ಟು ನಿಟ್ಟಿನ ನಿಗಾ ಇಡಲು ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಸೋಂಕು ನಿಯಂತ್ರಣಕ್ಕೂ ಒತ್ತು ನೀಡುವ ಒತ್ತಡಕ್ಕೆ ಸಿಲುಕಿರುವ ಅವರು ದ್ವಿಪಾತ್ರಗಳಲ್ಲಿ ಕೆಲಸ ಮಾಡಬೇಕಾಗಿದೆ.
ಪೊಲೀಸರ ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರೌಡಿಗಳು ಅಟ್ಟಹಾಸ ಮರೆಯಲಾರಂಭಿಸಿದ್ದಾರೆ. ಅದಕ್ಕೆ ಸಾಕ್ಷಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ, ಆದರೂ ಕಠಿಣ ಸಂದರ್ಭದಲ್ಲೂ ರೌಡಿಗಳ ಹೆಡೆಮುರಿ ಕಟ್ಟುವ ಸಲುವಾಗಿ ಕೆಲ ದಿನಗಳ ಹಿಂದೆ ಪರಪ್ಪನ ಆಗ್ರಹಾರಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಕಾಸಿಗಾಗಿ ಜೈಲಿನ ಅಧಿಕಾರಿಗಳು ತಮ್ಮನ್ನು ತಾವೇ ಮಾರಿಕೊಂಡಿದ್ದರು ಎಂದು ಗೊತ್ತಾಗಿದೆ. ಕೇಂದ್ರ ಕಾರಾಗೃಹಕ್ಕೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಸಿಕ್ಕ ಮಾರಕಾಸ್ತ್ರ, ಗಾಂಜಾಗಳೇ ಇದಕ್ಕೆ ಸಾಕ್ಷಿ.
ಇನ್ನು ಇದರ ಮುಂದುವರಿದ ಭಾಗವಾಗಿ ಸಿಸಿಬಿ ಪೊಲೀಸರು ವಿವಿಧ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾರಂಭಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಕೂಡಾ 45 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ, ಜೆಸಿಬಿ ನಾರಾಯಣ ಹೀಗೆ ಬಿರುದಾಂಕಿತರ ಮನೆಗಳನ್ನು ಪೊಲೀಸರು ಹುಡುಕಾಡಿದ್ದಾರೆ.
ಈ ವೇಳೆ ಹಲವು ರೌಡಿಗಳ ಮನೆಯಲ್ಲಿ ಮಾರಕಾಸ್ತ್ರ, ದೊಡ್ಡ ಮೊತ್ತದ ನಗದು, ಆಸ್ತಿ ಪತ್ರಗಳು ಪತ್ತೆಯಾಗಿದೆ. ಅಚ್ಚರಿ ಅಂದ್ರೆ ರೌಡಿಯೊಬ್ಬನ ಮನೆಯಲ್ಲಿ 254 ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ.
ರೌಡಿ ಶೀಟರ್ ಶಾನುವಾಸ್ ಮನೆಯಲ್ಲಿ ಬೆಂಗಳೂರು ನಿವಾಸಿಗಳಿಗೆ ಸೇರಿದ 254 ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಇವೆಲ್ಲವೂ ಅಸಲಿ ಕಾರ್ಡ್ ಗಳು ಎಂದು ಗೊತ್ತಾಗಿದೆ. ಆದರೆ ಅದ್ಯಾವ ಕಾರಣಕ್ಕೆ ಈತ ಆಧಾರ್ ಕಾರ್ಡ್ ಗಳನ್ನು ತಂದು ಗುಡ್ಡೆ ಹಾಕಿದ್ದ ಎಂದು ಗೊತ್ತಾಗಿಲ್ಲ. ಇನ್ನು ಸೈಕಲ್ ರವಿ ಮನೆಯಲ್ಲಿ ತಮಿಳುನಾಡಿನ ಆಸ್ತಿ ಪತ್ರಗಳು ಸಿಕ್ಕಿವೆ. ಕಲಾಸಿಪಾಳ್ಯ ನಾಗನ ಮನೆಯಲ್ಲಿ 2 ಲಕ್ಷ ನಗದು, ಡ್ರ್ಯಾಗರ್ ಗಳು ಪತ್ತೆಯಾಗಿದೆ.
Discussion about this post