ಬೆಂಗಳೂರು : ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇರ್ತಾರೆ ಅನ್ನುವ ಮಾತು ಅದೆಷ್ಟು ಸಲ ಸುಳ್ಳಾಗಿದೆ ಹೇಳಿ. ಒಂದೋ ಎರಡೋ ಅಷ್ಟೇ. ಉಳಿದ ಸಂದರ್ಭಗಳಲ್ಲಿ ಈ ಮಾತು ನಿಜವಾಗಿದೆ. ಹಾಗಿದ್ದ ಮೇಲೂ ಜನ ಮೋಸ ಹೋಗುವುದು ನಿಂತಿಲ್ಲ. ಅದರಲ್ಲೂ ಅಕ್ಷರಸ್ಥರೇ ಮೋಸ ಹೋಗ್ತಾರೆ ಅಂದ್ರೆ, ಮೋಸ ಹೋಗುವವರು ದಡ್ಡರೋ, ಮೋಸ ಮಾಡುವವರೋ ಅತೀ ಬುದ್ದಿವಂತರೋ ಅನ್ನುವುದೇ ಯಕ್ಷ ಪ್ರಶ್ನೆ.
ಇನ್ನು ಮ್ಯಾಟ್ರಿಮೋನಿಯನ್ ಸೈಟ್ ಗಳನ್ನು ನಂಬಿ ಮೋಸ ಹೋಗುವವರ ಸಂಖ್ಯೆ ಸಿಕ್ಕಾಪಟ್ಟೆ. ಲೆಕ್ಕ ಹಾಕಿದ್ರೆ ರಾಜ್ಯದಲ್ಲಿರುವ ಅಷ್ಟೂ ಪೊಲೀಸ್ ಠಾಣೆಗಳಲ್ಲಿ ಇಂತಹುದೊಂದು ವಂಚನೆ ಪ್ರಕರಣ ದಾಖಲಾಗಿರುತ್ತದೆ. ಮತ್ತೂ ವಿಶೇಷ ಅಂದ್ರೆ ಅಲ್ಲಿ ಮೋಸ ಹೋದವರಲ್ಲಿ ಬಹುತೇಕರು ಟೆಕ್ಕಿಗಳು.
ಹೀಗೆ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಒಳ್ಳೆಯ ಗಂಡನಿಗಾಗಿ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಕಳೆದ ಫೆಬ್ರವರಿಯಲ್ಲಿ ತನ್ನ ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ
ಬೆಂಗಳೂರು ಮೂಲದ ಮಹಿಳಾ ಟೆಕ್ಕಿಯೊಬ್ಬರಿಗೆ ಮಧ್ಯಪ್ರದೇಶದ ಯುವಕನೊಬ್ಬ ಪರಿಚಯವಾಗಿದ್ದ. ನಾನು ದೊಡ್ಡ ಕುಳ ಎಂದು ಫೋಸು ಕೊಟ್ಟಿದ್ದ ಆ ಯುವಕ ಟೆಕ್ಕಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ.
ಯುವತಿ ಅಕೌಂಟ್ ಗೆ ಮದುವೆ ಪ್ರಪೋಸಲ್ ಕಳುಹಿಸಿದ್ದ ಮಧ್ಯಪ್ರದೇಶ ಮೂಲದ ಯುವಕ ಮದುವೆ ಆಗೋದಾಗಿ ನಂಬಿಸಿ, ಇಂದ್ರ ಚಂದ್ರನನ್ನು ತೋರಿಸಿದ್ದ. ಆತನ ಮಾತು ನಂಬಿದ್ದ ಟೆಕ್ಕಿ ಕೂಡಾ ಸುಖ ಸಂಸಾರದ ಕನಸು ಕಂಡಿದ್ದರು.
ಈ ನಡುವೆ ಟೆಕ್ಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಮಧ್ಯಪ್ರದೇಶದ ಅದಿರ್ಶ್ ಶರ್ಮಾ ನಾನು ಬೆಂಗಳೂರಿನಲ್ಲೇ ಬಿಸಿನೆಸ್ ಮಾಡ್ತೀನಿ ಆಮೌಂಟ್ ಶಾರ್ಟೇಜ್ ಇದೆ ಅಂತ ಯುವತಿ ಬಳಿ ಕಥೆ ಕಟ್ಟಿದ್ದ. ಮೆಚ್ಚಿದ ಹುಡುಗ ಬೆಂಗಳೂರಿಗೆ ಬರ್ತಾನೆ ಅಂದಾಗ ಆಕೆಗೂ ಆಕಾಶಕ್ಕೆ ಮೂರೇ ಗೇಣು. ಹೀಗಾಗಿ ಮದುವೆಯಾಗೋ ಹುಡುಗ ಅಂತ ಬ್ಯಾಂಕಿನಿಂದ 10 ಲಕ್ಷ ಲೋನ್ ಪಡೆದ ಮಹಿಳಾ ಟೆಕ್ಕಿ ಆತನಿಗೆ ಕಾಸು ಕೊಟ್ಟಿದ್ದಾಳೆ.
ಇದೀಗ ಹಣ ಪಡೆಯುತ್ತಿದ್ದಂತೆ ಅದಿರ್ಶ್ ಶರ್ಮಾ ಮೊಬೈಲ್ ಸ್ವಿಚ್ ಮಾಡಿಕೊಂಡಿರುವ ಆರೋಪಿ ಎಸ್ಕೇಪ್ ಆಗಿದ್ದಾನೆ.
ಈ ಸಂಬಂಧ ಮೋಸಹೋದ ಮಹಿಳಾ ಟೆಕ್ಕಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Discussion about this post