ಬೆಂಗಳೂರು :ರೌಡಿಯೊಬ್ಬನ ಜೊತೆಗೆ ಪ್ರೀತಿಯಲ್ಲಿ ಬಿದ್ದ ನಟಿಯೊಬ್ಬಳು ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರಿದ ಘಟನೆ ಬೆಂಗಳೂರಿನಲ್ಲಿ ರಾಜಗೋಪಾಲನಗರದಲ್ಲಿ ನಡೆದಿದೆ.
ರೌಡಿಶೀಟರ್ ಕುಣಿಗಲ್ ಗಿರಿ ಎಂಬಾತನ ಅಣ್ಣ ಹರೀಶ್ ಎಂಬಾತ ಚಂದನವನದ ಸಹಕಲಾವಿದೆಯ ಹಿಂದೆ ಬಿದ್ದಿದ್ದ. ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಆತ ಆಕೆಯನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ವೇಳೆ ಆಕೆಯ ಚಿನ್ನ ನಗದಿನ ಮೇಲೆ ಕಣ್ಣು ಹಾಕಿದ್ದ ಹರೀಶ್ ಆಕೆಯನ್ನು ಮದುವೆಯಾಗಿ ನಂಬಿಸಿ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೊಂದು ದಿನ, ಆಕೆಯ ಮನೆಯಲ್ಲೇ ತಾಳಿಯನ್ನೂ ಕಟ್ಟಿದ್ದ.
ಇದಾದ ಬಳಿಕ ಗಂಡನಂತೆ ನಟಿಸಿದ್ದ ಹರೀಶ್ 180 ಗ್ರಾಮ್ ಚಿನ್ನಾಭರಣ ಹಾಗೂ 2.5 ಲಕ್ಷ ರೂ. ನಗದಿನೊಂದಿಗೆ ಇದೀಗ ಪರಾರಿಯಾಗಿದ್ದಾನೆ. ಈ ಕುರಿತಂತೆ ಯುವತಿ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಯುವತಿಗೆ ಕರೆ ಮಾಡಿರುವ ಹರೀಶ, ಕುಣಿಗಲ್ ಗಿರಿ ನನ್ನ ತಮ್ಮ ಅವನು ದೊಡ್ಡ ರೌಡಿ, ದೂರು ವಾಪಸ್ ಪಡೆದರೆ ಸರಿ, ತಪ್ಪಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ನಡುವೆ ಕುಣಿಗಲ್ ಗಿರಿ ಕೂಡ ಜೈಲಿನಿಂದಲೇ ಕರೆ ಮಾಡಿ ಕೇಸು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾನಂತೆ. ಈ ಬಗ್ಗೆ. ಯುವತಿ ಹರೀಶ್ ಮಾತ್ರವಲ್ಲದೆ ಗಿರಿ ವಿರುದ್ಧವೂ ದೂರು ನೀಡಿದ್ದಾರೆ. ಜೈಲಿನಿಂದಲೇ ಬೆದರಿಕೆ ಕರೆ ಬರುತ್ತದೆ ಅಂದ್ರೆ ರಾಜ್ಯದ ಕಾನೂನು ಸುವ್ಯವಸ್ಥೆಯ ಕಥೆ ಏನಾಗಿದೆ ಅನ್ನುವ ಪ್ರಶ್ನೆ ಮೂಡುತ್ತದೆ.
Discussion about this post