ಕೇರಳದ ಕೊಲ್ಲಂ ಜಿಲ್ಲೆಯ ಮುಂಡಕಲ್ ನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ತನ್ನ ಕಾರಿನ ಹಿಂಭಾಗದಲ್ಲಿ ಉಗ್ರ ಒಸಾಮ ಬಿನ್ ಲ್ಯಾಡೆನ್ ಸ್ಟಿಕರ್ ಅಂಟಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಎಂಎಸ್ ಎನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಹಮ್ಮದ್ ಹನೀಫ್ (22) ಕಾರಿನ ಹಿಂಭಾಗದಲ್ಲಿ ಉಗ್ರ ಬಿನ್ ಲ್ಯಾಡೆನ್ ಸ್ಟಿಕರ್ ಅಂಟಿಸಿರುವ ಯುವಕನಾಗಿದ್ದು, ಪೊಲೀಸರು ಈತನ ಕಾರನ್ನು ವಶಕ್ಕೆ ಪಡೆದಿದ್ದಾರೆ.
ರಸ್ತೆಯಲ್ಲಿ ಕಾರು ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವರು ಈ ಚಿತ್ರವನ್ನು ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು,ಕಾರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕಾರಿನಲ್ಲಿ ಚಾಲಕ ಸೇರಿ 3 ಜನ ಸಂಚರಿಸುತ್ತಿದ್ದರು. ಕಾರಿನ ಚಾಲಕನನ್ನು ಹರೀಶ್ ಎಂದು ಗುರುತಿಸಲಾಗಿದೆ.
ಚಾಲಕ ಹರೀಶ್ ಮದುವೆ ಕಾರ್ಯಕ್ರಮಕ್ಕಾಗಿ ಹನೀಫ್ ನಿಂದ ಕಾರನ್ನು ಪಡೆದುಕೊಂಡಿದ್ದ, ಈ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರಿನ ಮಾಲಿಕ ಹನೀಫ್ ನನ್ನು ವಿಚಾರಣೆಗೊಳಪಡಿಸಿದ್ದಾರೆ.
ತಾನು ಮೋಜಿಗಾಗಿ ಈ ರೀತಿ ಸ್ಟಿಕರ್ ಅಂಟಿಸಿರುವುದಾಗಿ ಹನೀಫ್ ಹೇಳಿಕೆ ನೀಡಿದ್ದಾನೆ.
ಪಶ್ಚಿಮ ಬಂಗಾಳದ ನೋಂದಣಿ ಹೊಂದಿರುವ ಹೋಂಡಾ ಅಕಾರ್ಡ್ ಕಾರನ್ನು ಹನೀಫ್ ಬೆಂಗಳೂರಿನ ಸ್ನೇಹಿತನಿಂದ 4.5 ಲಕ್ಷ ರೂಪಾಯಿ ಕೊಟ್ಟು ಒಂದು ವರ್ಷದ ಹಿಂದೆ ಖರೀದಿಸಿದ್ದನಂತೆ. ಇದೀಗ ಕಾರಿನ ಮಾಲೀಕರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discussion about this post