ಅಮೆರಿಕಾದ ಪ್ರಜೆಗಳಿಗೆ ದೋಖಾ ಮಾಡುತ್ತಿದ್ದ ನಕಲಿ ಕಾಲ್ ಸೆಂಟರ್ ( fake call center in bangalore ) ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ
ಬೆಂಗಳೂರು : ನಕಲಿ ಅನ್ನುವುದು ಎಲ್ಲಿಲ್ಲ ಹೇಳಿ. ಅಸಲಿಯ ತಲೆ ಮೇಲೆ ಹೊಡದಂತೆ ನಕಲಿ ಜಾಲ ಕಾರ್ಯಾಚರಿಸುತ್ತಿದೆ. ಇದೀಗ ಭಾರತದ ಹೆಸರಿಗೆ ಮಸಿ ಬಳಿಯುವ ಸಲುವಾಗಿ ನಕಲಿ ಕಾಲ್ ಸೆಂಟರ್ ಗಳ ( fake call center in bangalore ) ಜಾಲ ಶುರುವಾಗಿದೆ. ಹೀಗೆ ಬೆಂಗಳೂರಿನಲ್ಲಿ ಅಮೆರಿಕಾದ ಪ್ರಜೆಗಳನ್ನು ವಂಚಿಸುತ್ತಿದ್ದ ನಕಲಿ ಕಾಲ್ ಸೆಂಟರ್ ಜಾಲವನ್ನು ವೈಟ್ ಫೀಲ್ಡ್ ಪೊಲೀಸರು ( whitefield police ) ಬೇಧಿಸಿದ್ದಾರೆ.
ಸಾಫ್ಟ್ ವೇರ್ ಕಂಪನಿ ಮಾದರಿಯಲ್ಲಿ ನಕಲಿ ಕಾಲ್ ಸೆಂಟರ್ ತೆರೆದಿದ್ದ ಖದೀಮರು, ಟೆಲಿಕಾಲರ್ ಗಳ ಮೂಲಕ ಅಮೆರಿಕಾ ಪ್ರಜೆಗಳಿಗೆ ಕರೆ ಮಾಡಿ ಗಿಫ್ಟ್ ಕಾರ್ಡ್ ಹೆಸರಿನಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದೆ. ಅಮೆರಿಕಾದಲ್ಲಿ ನೆಲೆಸಿರುವ ಕಿಂಗ್ ಪಿನ್ ಈ ಜಾಲವನ್ನು ನಿಯಂತ್ರಿಸುತ್ತಿದ್ದ.
ಇದನ್ನೂ ಓದಿ : ಧರ್ಮಾಧಿಕಾರಿಯವರ ತಮ್ಮನನ್ನು ಕಾಂಗ್ರೆಸ್ ಗೆ ಸೆಳೆಯಲು ಯತ್ನ : ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಡಿಕೆಶಿ
ಹೇಗೆ ಕೆಲಸ ಮಾಡುತ್ತದೆ ಈ ನಕಲಿ ಕಾಲ್ ಸೆಂಟರ್
ಅಮೆರಿಕಾದಲ್ಲಿ ಕೂತಿರುವ ಕಿಂಗ್ ಪಿನ್ ಅಮೆರಿಕಾ ಪ್ರಜೆಗಳ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತಾ ಸಂಖ್ಯೆ, ಅಮೆಜಾನ್ ಖಾತೆ, ವಾಲ್ ಮಾರ್ಟ್ ಖಾತೆಯ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಅಮೆರಿಕಾ ಪ್ರಜೆಗಳಿಗೆ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ನಿಮಗೆ ಗಿಫ್ಟ್ ಬಂದಿದೆ, ಖಾತೆಯಿಂದ ಹಣ ವರ್ಗಾವಣೆಯಾಗಿದೆ ಅನ್ನುವ ಸಂದೇಶ ಕಳುಹಿಸುತ್ತಿದ್ದ. ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಕಾಲ್ ಸೆಂಟರ್ ಗೆ ಕರೆ ಮಾಡಿ ಎಂದು ಲಿಂಕ್ ಕೊಡುತ್ತಿದ್ದ.
ಗಾಬರಿಯಿಂದ, ಗಿಫ್ಟ್ ಆಸೆಯಿಂದ ಈ ಲಿಂಕ್ ತೆರೆದರೆ ಈ ಕರೆ ಬೆಂಗಳೂರಿನಲ್ಲಿದ್ದ ಕಾಲ್ ಸೆಂಟರ್ ಗೆ ಕನೆಕ್ಟ್ ಆಗುತ್ತಿತ್ತು. ಇದೇ ವೇಳೆ ಅಮೆರಿಕಾ ಪ್ರಜೆಗಳೊಂದಿಗೆ ಅದೇ American Accent ನಲ್ಲಿ ಮಾತನಾಡಿ ಬ್ಯಾಂಕ್ ಖಾತೆ, ಅಮೆಜಾನ್ ಖಾತೆ, ವಾಲ್ ಮಾರ್ಟ್ ಖಾತೆಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬಳಿಕ ಗಿಫ್ಟ್ ಕಾರ್ಡ್ ಖರೀದಿಸಿ ಕೋಡ್ ಕೇಳುತ್ತಿದ್ದರು.
ಈ ಕೋಡ್ ಅನ್ನು ಟೀಮ್ ಲೀಡರ್ ಗಳು ಅಮೆರಿಕಾದ ಕಿಂಗ್ ಪಿನ್ ಗೆ ಕಳುಹಿಸುತ್ತಿದ್ದರು. ಆತ ಆ ಗಿಫ್ಟ್ ಕಾರ್ಡ್ ಅನ್ನು ಡಾಲರ್ ಗೆ ಪರಿವರ್ತಿಸುತ್ತಿದ್ದ. ಆದರೆ ಬೆಂಗಳೂರಿನಲ್ಲಿದ್ದ ಟೆಲಿಕಾಲರ್ ಗಳಿಗೆ ( telecaller) ತಾವು ಮಾಡುತ್ತಿರುವುದು ಮೋಸ ಅನ್ನುವುದು ಗೊತ್ತಿರಲಿಲ್ಲ. ಬದಲಾಗಿ ಕೆಲಸ ಎಂದೇ ನಂಬಿದ್ದರು. ಇದೇ ರೀತಿ ಬೇರೆ ಬೇರೆ ಮಾರ್ಗದಲ್ಲಿ ಅಮೆರಿಕಾ ಪ್ರಜೆಗಳ ವಂಚನೆ ನಡೆಯುತ್ತಿತ್ತು.
ಇದನ್ನೂ ಓದಿ : sai pallavi : ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ ಕೊಟ್ಟ ನಟಿಗೆ ಸಂಕಷ್ಟ : ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ನ್ಯಾಯಾಲಯ
ಟೆಲಿ ಕಾಲರ್ ಕೆಲಸಕ್ಕಾಗಿ ಗುಜರಾತ್, ಮುಂಬೈ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕರೆಸಿಕೊಂಡಿದ್ದರು. ಇವರಿಗೆ ಉತ್ತಮ ಸಂಬಳ ಭತ್ಯೆ ನೀಡಲಾಗುತ್ತಿತ್ತು. ಮುಂಚೆಯೇ ಕೊಟ್ಟ ಸ್ರ್ಕಿಪ್ಟ್ ಆಧಾರದಲ್ಲೇ ಇವರು ಅಮೆರಿಕಾದ ಪ್ರಜೆಗಳೊಂದಿಗೆ ಮಾತನಾಡಬೇಕಾಗಿತ್ತು. ಈ ಎಲ್ಲಾ ಕರೆಗಳನ್ನು ಟೀಮ್ ಲೀಡರ್ ಗಳು ನಿಯಂತ್ರಿಸುತ್ತಿದ್ದರು. ಹೀಗಾಗಿಯೇ 11 ಟೀಂ ಲೀಡರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗುಜರಾತ್ ಮೂಲದ ರಿಷಿ ವ್ಯಾಸ್, ಪ್ರತೀಕ್, ಸೈಯದ್, ಪಾರಿಕ್ ಬಿರೆನ್, ಕರಣ್, ಹಿತ ಪಾಟೇಲ್, ಜಿತಿಯಾ ಕಿಸನ್, ಬಿಹಾಂಗ್, ರಾಜ್ ಲಾಹಿ ಸೋನಿ, ಮಿತೇಶ್ ಮತ್ತು ವಿಶಾಲ್ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆ ಸಂದರ್ಭದಲ್ಲಿ 3 ಕೋಟಿ ಮೌಲ್ಯದ 159 ಡೆಸ್ಕ್ ಟಾಪ್, 4 ಲ್ಯಾಪ್ ಟಾಪ್, 150 ಹೆಡ್ ಫೋನ್, 10 ಅಂತರರಾಷ್ಟ್ರೀಯ ಹಾರ್ಡ್ ಡಿಸ್ಕ್, 6 ಮೊಬೈಲ್, ಮೂರು ಕಾರು, 2 ಶಾಲಾ ವಾಹನ, 1 ಟಿಟಿ ವಾಹ ಮತ್ತು 33 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ಹೇಗೆ ನಡೆಯಿತು…?
ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ ಎಥಿಕಲ್ ಇನ್ ಫೋ ಕಂಪನಿ ಪ್ರೈವೆಟ್ ಲಿಮಿಟೆಡ್ ಕಂಪನಿಯ ಬಗ್ಗೆ ಅನುಮಾನವೊಂದು ಹುಟ್ಟಿತ್ತು. ಜೊತೆಗೆ ಅಮೆರಿಕಾದ ಪ್ರಜೆಗಳಿಗೆ ಆಗುತ್ತಿರುವ ವಂಚನೆಯ ಜಾಲ ಬೆಂಗಳೂರಿನಲ್ಲಿದೆ ಅನ್ನುವ ಮಾಹಿತಿಯೂ ತಲುಪಿತ್ತು. ಈ ಹಿನ್ನಲೆಯಲ್ಲಿ ವೈಟ್ ಫೀಲ್ಡ್, ಮಹಾದೇವಪುರ ಮತ್ತು ವೈಟ್ ಫೀಲ್ಡ್ ಸೈಬರ್ ಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.
ಮೊದಲು ಶಾಲಾ ವಾಹನದಲ್ಲಿ ಉದ್ಯೋಗಿಗಳನ್ನು ಪಿಕಪ್ ಅಂಡ್ ಡ್ರಾಪ್ ಮಾಡುವುದನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ಇವರ ಕಂಪನಿಗೆ ಯಾವುದೇ ಅನುಮತಿ ಇಲ್ಲ ಅನ್ನುವುದು ಕಂಡು ಹಿಡಿದಿದ್ದಾರೆ. ಇದಾದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ದಾಳಿ ನಡೆಸಲಾಗಿದೆ.
ಹಾಗೇ ನೋಡಿದರೆ ನಕಲಿ ಕಾಲ್ ಸೆಂಟರ್ ಜಾಲ ಹೊಸದಲ್ಲ. ಈ ಹಿಂದೆಯೇ ದೇಶ ವಿವಿಧ ಭಾಗಗಳಲ್ಲಿ ಇಂತಹ ಕಂಪನಿಗಳು ಕೆಲಸ ಮಾಡುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಕಾನೂನಿನ ಕುಣಿಕೆಯಿಂದ ಹೇಗೋ ಪಾರಾಗುತ್ತಿದ್ದ ಇವರು ಮತ್ತೆ ಮತ್ತೊಂದು ಸ್ವರೂಪದಲ್ಲಿ ದಂಧೆಗಿಳಿಯುತ್ತಿದ್ದರು.
Discussion about this post