ಬೆಂಗಳೂರು : ವ್ಯಾಪಾರದಲ್ಲಿ ಸಂಭವಿಸಿದ್ದ ಕೋಟಿ ಕೋಟಿ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಚಿನ್ನಾಭರಣ ಮಳಿಗೆಗಳಿಗೆ ಕನ್ನ ಹಾಕಿಸುವ ದಂಧೆಗೆ ಇಳಿದ ವ್ಯಾಪಾರಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ದೇವರಾಮ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿನ್ನಾಭರಣದ ಅಂಗಡಿ ಹೊಂದಿದ್ರೆ, ಜಿಗಣಿ ಸಮೀಪದ ಯರೇಂಬಡನಬಳ್ಳಿಯಲ್ಲಿ ಡವರ್ ಲಾಲ್ ಸ್ಟೀಲ್ ಅಂಗಡಿ ಹೊಂದಿದ್ದ. ಕಾಕತಾಳೀಯ ಅನ್ನುವಂತೆ ಇಬ್ಬರೂ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡಿದ್ದರು. ಹೀಗಾಗಿ ಕೋಟಿ ಕೋಟಿ ಸಾಲದ ಸುಳಿಗೆ ಸಿಲುಕಿದ್ದರು. ಸಾಲದ ಸುಳಿಯಿಂದ ಹೊರಬರಲು ಚಿನ್ನಾಭರಣ ಮಾರಾಟ ಮಳಿಗೆಯ ದರೋಡೆಗೆ ನೀಲನಕ್ಷೆ ಸಿದ್ದಪಡಿಸಿದ್ದರು.
ಇವರಿಬ್ಬರ ಪ್ಲಾನ್ ಗೆ ಮೋಂಬತ್ತಿ ತಯಾರಿಕ ಘಟಕವೊಂದರ ಮಾಲೀಕ ಸುನಿಲ್ ಮತ್ತು ನಗರ್ತಪೇಟೆಯ ಮತ್ತೊಬ್ಬ ವ್ಯಾಪಾರಿ ಧೀರಜ್ ನೆರವು ನೀಡಿದ್ದರು. ಹೀಗೆ 5 ಜನ ಜೊತೆ ಸೇರಿ ರಾಜಸ್ಥಾನದ ಕ್ರಿಮಿನಲ್ ಗಳಾದ ಸುಗುಣ ಮತ್ತು ರವೀಂದ್ರಪಾಲ್ ರನ್ನು ಸಂಪರ್ಕಿಸಿದ್ದಾರೆ. ಸಪ್ಟಂಬರ್ ನಲ್ಲಿ ನಗರಕ್ಕೆ ಬಂದ ಅವರಿಗೆ ದೇವರಾಮ್ ಮತ್ತು ಸುನಿಲ್ ಆಶ್ರಯ ಕಲ್ಪಿಸಿದ್ದರು.
ನಂತರ ಬೆಂಗಳೂರು ಹೊರವಲಯದಲ್ಲಿ ಸುತ್ತಾಟ ನಡೆಸಿದ್ದ ಇವರು ಭದ್ರತೆ ಇಲ್ಲದ ಚಿನ್ನಾಭರಣ ಮಳಿಗೆಯ ಪತ್ತೆ ಕಾರ್ಯ ನಡೆಸಿ, ಬೊಮ್ಮಹಳ್ಳಿಯಲ್ಲಿ ಒಂದು ಚಿನ್ನಾಭರಣ ಅಂಗಡಿ ಹಾಗೂ ಬಟ್ಟೆ ಅಂಗಡಿ ಉಳಿದಂತೆ ಚಂದಾಪುರ ಮತ್ತು ನಗರ್ತಪೇಟೆಯಲ್ಲಿ ಮೂರು ಚಿನ್ನಾಭರಣ ಅಂಗಡಿ ದೋಚಲು ನಿರ್ಧರಿಸಿದ್ದರು.
ಅದರಂತೆ ಚಿಕ್ಕಪೇಟೆಯ ಮಕ್ಕಳ ಸ್ಟ್ರೀಟ್ ನಲ್ಲಿದ್ದ ಮಹರಾಷ್ಟ್ರ ಮೂಲದ ಗಣೇಶ್ ಪವಾರ್ ಅಂಗಡಿಯನ್ನು ಅಕ್ಟೋಬರ್ 10ರಂದು ದರೋಡೆ ಮಾಡಿದ್ದರು. ಗ್ಯಾಸ್ ಕಟ್ಟರ್ ಬಳಸಿ ಶೆಟರ್ ಮುರಿದ ಖದೀಮರು 750 ಗ್ರಾಮ್ ಚಿನ್ನದ ಗಟ್ಟಿ, 7.5 ಲಕ್ಷ ರೂಪಾಯಿ ನಗದು ಹಾಗೂ 1 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದರು.
ಗಣೇಶ್ ಕಾರ್ಪ್ ಕಳ್ಳತನ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ತನಿಖೆ ಪ್ರಾರಂಭಿಸಿದ ವೇಳೆ ಮಹತ್ವದ ಮಾಹಿತಿಗಳು ಸಿಗಲಿಲ್ಲ. ಹೀಗಾಗಿ ಇದೊಂದು ಕಠಿಣ ಪ್ರಕರಣವಾಗಿ ಪರಿಣಮಿಸಿತ್ತು. ಹಾಗಿದ್ದರೂ ಪಟ್ಟು ಬಿಡದ ಪೊಲೀಸರು ತಾಂತ್ರಿಕ ಮಾಹಿತಿಗಳ ಮೊರೆ ಹೋಗಿ ಮೊಬೈಲ್ ಮತ್ತು ಸಿಸಿಟಿವಿಗಳ ಬೆನ್ನು ಹತ್ತಿದರು.
ಅದರಂತೆ ಕೃತ್ಯ ನಡೆದ ಬಳಿಕ ನಗರ್ತಪೇಟೆ, ಹಲಸೂರು ಗೇಟ್ ಮತ್ತು ಸಿಟಿ ಮಾರುಕಟ್ಟೆಯ ಸಿಸಿಟಿವಿ ದೃಶ್ಯ ಪರಿಶೀಲನೆ ವೇಳೆ ಸುನಿಲ್ ಕಾರು ಓಡಾಟದ ದೃಶ್ಯಗಳ ಮೇಲೆ ಅನುಮಾನ ಬಂದಿದೆ. ಹೀಗಾಗಿ ಅದೇ ಪ್ರದೇಶದ ಮೊಬೈಲ್ ಕರೆಗಳ ಮಾಹಿತಿ ತೆಗೆದ್ರೆ ಸುನಿಲ್ ಜೊತೆಗೆ ದೇವರಾಮ್, ಡವರ್ ಲಾಲ್ ಸಂಪರ್ಕ ಸಿಕ್ಕಿದೆ. ಹೀಗಾಗಿ ಸುನಿಲ್ ನನ್ನು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಹೊರಬಿದ್ದಿದೆ.
ಆದರೆ ಅಷ್ಟು ಹೊತ್ತಿಗೆ ಸುಗುಣ, ವಿನೋದ್, ರವೀಂದ್ರನಾಥ್ ರಾಜಸ್ಥಾನ ಸೇರಿದ್ದರು. ಉಳಿದವರು ಚಂದಾಪುರದ ಅಂಗಡಿ ದೋಚುವ ಸಲುವಾಗಿ ನಗರದಲ್ಲೇ ಉಳಿದುಕೊಂಡಿದ್ದರು. ಹೀಗಾಗಿ ಇದೀಗ ದೇವರಾಮ್, ಡವರ್ ಲಾಲ್, ಸುನಿಲ್ ಮತ್ತು ದರೋಡೆ ತಂಡದ ಧೀರಜ್,ದಿನೇಶ್,ರಾಜೇಂದ್ರ, ಅಶೋಕ್ ಕುಮಾರ್, ಗೋವರ್ಧನ್ ಸಿಂಗ್ ಮತ್ತು ಶ್ರೀರಾಮ್ ನನ್ನು ಬಂಧಿಸಲಾಗಿದೆ. ಬಂಧಿತರಿಂದ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
Ulsoor Gate police have arrested the accused of theft and conspiracy at a gold shop in Supari.
Discussion about this post