ಬೆಂಗಳೂರು : ಹಳೆಯ ಕೇಸ್ ಗಳ ತನಿಖೆ ಬಗ್ಗೆ ಪೊಲೀಸರ ವಿರುದ್ಧ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಚುರುಕಾಗಿದ್ದರು. ತಮ್ಮ ವಿಭಾಗದಲ್ಲಿ ಪತ್ತೆಯಾಗದಿರುವ ಹಳೆಯ ಕೇಸ್ ಗಳ ಮರು ತನಿಖೆಗೆಗೆ ಡಿಸಿಪಿ ಹರೀಶ್ ಪಾಂಡೆ ಆದೇಶಿಸಿದ್ದರು.
ಈ ಪೈಕಿ 2ನೇ ಮದುವೆ ಆಸೆಗಾಗಿ ಮೊದಲ ಪತ್ನಿ ಮಕ್ಕಳನ್ನು ಕೊಂದಿದ್ದ ನಿವೃತ ಯೋಧ ಧರ್ಮಸಿಂಗ್ ಯಾದವ್ ಪ್ರಕರಣವೂ ಒಂದಾಗಿತ್ತು. 1987ರಲ್ಲಿ ಜವಾನನಾಗಿ ವಾಯುಸೇನೆ ಕೆಲಸಕ್ಕೆ ಸೇರಿದ್ದ ಧರ್ಮಸಿಂಗ್ ದೇಶದ ಹಲವು ಭಾಗಗಳಲ್ಲಿ ಕೆಲಸ ಸಲ್ಲಿಸಿ 1997ರಲ್ಲಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುವಾಗ ನಿವೃತನಾಗಿದ್ದ. ಈ ನಡುವೆ ಹರಿಯಾಣ ಮೂಲದ ಧರ್ಮಸಿಂಗ್ ದೆಹಲಿಯ ಅನುಯಾದವ್ ಅನ್ನುವವರನ್ನು ಮದುವೆಯಾಗಿ 14 ಮತ್ತು 8 ವರ್ಷದ ಹೆಣ್ಣು ಮಕ್ಕಳ ತಂದೆಯಾಗಿದ್ದ.
ನಿವೃತಗೊಂಡ ಧರ್ಮಸಿಂಗ್ ಯಾದವ್ ವಿದ್ಯಾರಣ್ಯಪುರದಲ್ಲಿ ಸ್ವಂತ ಮನೆ ಮಾಡಿ ಕುಟುಂಬದ ಜೊತೆಗೆ ವಾಸವಾಗಿದ್ದ. ಜೊತೆಗೆ ಸಂಜಯನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೂ ಸೇರಿದ್ದ. ಇದೇ ಸಂದರ್ಭದಲ್ಲಿ ಈತನಿಗೆ ಎರಡನೇ ಮದುವೆಯ ಆಸೆ ಹುಟ್ಟುಕೊಂಡಿದೆ. ಇದಕ್ಕಾಗಿ ಜೀವನ್ ಸಾಥಿ ಡಾಟ್ ಕಾಂ ನಲ್ಲಿ ಅವಿವಾಹಿತ ಎಂದು ಮಾಹಿತಿ ಅಪ್ ಲೋಡ್ ಮಾಡಿದ್ದ. ಈತನ ವಿವರ ನೋಡಿದ ಅಂಜನಕುಮಾರಿ ಅನ್ನುವವರು ವಿವಾಹಕ್ಕೂ ಸಮ್ಮತಿಸಿದ್ದರು. ಹೀಗಾಗಿ ಗೌಪ್ಯವಾಗಿ ಮದುವೆಗೆ ಸಿದ್ದತೆ ನಡೆಸಿದ್ದ.
ಯಾವಾಗ ಎರಡನೇ ಮದುವೆ ಮೊದಲ ಸಂಸಾರ ಅಡ್ಡಿ ಎಂದು ಗೊತ್ತಾಯ್ತೋ, 2008ರಲ್ಲಿ ಪತ್ನಿ ಮಕ್ಕಳನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ್ದ. ಪೊಲೀಸರನ್ನು ದಾರಿ ತಪ್ಪಿಸಲೆಂದು ಮೃತದೇಹಜ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಚಿನ್ನಾಭರಣ ಕಳುವು ಮಾಡಿದ್ದ. ಬಳಿಕ ಹೆಂಡತಿ ಮಕ್ಕಳ ಕೊಲೆಯಾಗಿದೆ ಎಂದು ನಾಟಕವಾಡಿದ್ದ. ಆಗ ಪೊಲೀಸರು ದಡ್ಡರಾಗಲಿಲ್ಲ.ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಧರ್ಮಸಿಂಗ್ ನನ್ನು ಬಂಧಿಸಿ ಜೈಲಿಗಟ್ಟಿದ್ದರು.
2 ವರ್ಷ 2 ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದ ಆರೋಪಿ ಜೈಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮೂತ್ರಕೋಶದಲ್ಲಿ ಸಮಸ್ಯೆ ಇರುವುದಾಗಿ ನಾಟಕ ಮಾಡಿದ್ದ. ಆಗ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ವೈದ್ಯರು ನೀರು ಕೊಡಿಸಿ ವಾಕಿಂಗ್ ಮಾಡುವಂತೆ ಹೇಳಿದ್ದಾರೆ. ವಾಕಿಂಗ್ ಮಾಡುವ ಸಂದರ್ಭದಲ್ಲಿ ಜೈಲಿನ ಅಡುಗೆ ಕೋಣೆಯಿಂದ ತಂದಿದ್ದ ಖಾರದ ಪುಡಿಯನ್ನು ಪೊಲೀಸರ ಕಣ್ಣಿಗೆ ಎರಚಿ ಪರಾರಿಯಾಗಿದ್ದ.
ಹಾಗೇ ತಪ್ಪಿಸಿಕೊಂಡವನ ಬಂಧನಕ್ಕೆ ಪೊಲೀಸರು ಪ್ರಯತ್ನ ನಡೆಸಿದ್ದರು. ಹರಿಯಾಣಕ್ಕೆ ನಾಲ್ಕೈದು ಸಲ ಹೋಗಿ ಬಂದಿದ್ದರು. ಆದರೆ ಆರೋಪಿ ಸಿಕ್ಕಿರಲಿಲ್ಲ. ಹೀಗಾಗಿ ಧರ್ಮಸಿಂಗ್ ಕಡತ ಧೂಳು ಹಿಡಿಯುಲಾರಂಭಿಸಿತ್ತು. ಯಾವಾಗ ನ್ಯಾಯಾಲಯ ಹಳೆಯ ಪ್ರಕರಣಗಳ ವಿಲೇವಾರಿಗೆ ಸೂಚಿಸಿತೋ ಧರ್ಮಸಿಂಗ್ ಕಡತಕ್ಕೆ ಜೀವ ಬಂತು.
ಹೀಗಾಗಿ ಮರು ತನಿಖೆ ಕೈಗೆತ್ತಿಕೊಂಡ ವಿವಿ ಪುರ ಠಾಣಾ ಪೊಲೀಸರು, ವಾಯುಸೇನೆಯ ಕಚೇರಿಗೆ ಹೋಗಿ ಮಾಹಿತಿ ಬಯಸಿದ್ದಾರೆ. ಆಗ ಪ್ರತೀ ತಿಂಗಳು ಮಾಸಿಕ ಪಿಂಚಣಿ ಪಡೆಯುವ ಮಾಹಿತಿ ಲಭಿಸಿದೆ. ಅದರಂತೆ ಅಸ್ಸಾಂ ಹೋಗಿ ಆರೋಪಿಯನ್ನು ಬಂಧಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಿಂದ ತಪ್ಪಿಸಿಕೊಂಡವನು ಹರಿಯಾಣಕ್ಕೆ ಹೋಗಿದ್ದ, ಅಲ್ಲಿ ಮೊದಲ ಸಂಬಂಧಿಕರು ಗಲಾಟೆ ಮಾಡಿದ್ರು ಅಂತಾ ಅಸ್ಸಾಂ ಓಡಿ ಹೋಗಿದ್ದ. ಅಲ್ಲಿ 2012ರಲ್ಲಿ ಶಾದಿ ಡಾಟ್ ಕಾಮ್ ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗಿ, ಎರಡು ಗಂಡು ಮಕ್ಕಳ ತಂದೆಯಾಗಿ ಸುಖ ಸಂಸಾರ ನಡೆಸುತ್ತಿದ್ದ.
Discussion about this post