ಚಿಕ್ಕಬಳ್ಳಾಪುರ : ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿದ ಯುವಕ ಬಳಿಕ ಅಕ್ಕನ ಮಗಳನ್ನು ಮದುವೆಯಾದ ಕರ್ಮಕ್ಕೆ ನವವಿವಾಹಿತೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೆಮಡುಗು ಗ್ರಾಮದಲ್ಲಿ ನಡೆದಿದೆ. ಯುವಕ ಮಾಡಿದ ಅನಾಚಾರದಿಂದ ಮೊದಲ ಪ್ರಿಯತಮೆ ಜೈಲು ಸೇರಿದ್ದಾಳೆ.
ಆನೆಮಡುಗು ಗ್ರಾಮದ 19 ವರ್ಷದ ಗಂಗೋತ್ರಿ ಹಾಗೂ ಇದೇ ಗ್ರಾಮದ ಗಂಗರಾಜು ಪರಸ್ಪರ ಪ್ರೀತಿಸುತ್ತಿದ್ದರು. ಅದೇನಾಯ್ತೋ ಗೊತ್ತಿಲ್ಲ. 10 ತಿಂಗಳ ಹಿಂದೆ ಗಂಗೋತ್ರಿಗೆ ಕೈ ಕೊಟ್ಟ ಗಂಗರಾಜು ಅಕ್ಕನ ಮಗಳಾದ ಮೋನಿಕಾಳನ್ನು ಮದುವೆಯಾಗಿದ್ದ.
ಇದರಿಂದ ಆಕ್ರೋಶಗೊಂಡಿದ್ದ ಗಂಗೋತ್ರಿ ದ್ವೇಷ ಸಾಧನೆಗೆ ಸಮಯಕ್ಕಾಗಿ ಕಾಯುತ್ತಿದ್ದಳು. ಈ ನಡುವೆ ಬಹಿರ್ದೇಸೆಗೆ ತೆರಳಿದ್ದ ಮೋನಿಕಾ ಮೇಲೆ ದಾಳಿ ನಡೆಸಿದ ಗಂಗೋತ್ರಿ ಮೋನಿಕಾಳ ಕತ್ತು ಕೊಯ್ದೆ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಹೇಗೋ ಗಂಗೋತ್ರಿ ಕೈಯಿಂದ ಪಾರಾದ ಮೋನಿಕಾಳನ್ನು ಮನೆಯವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದೀಗ ಮೋನಿಕಾಳಿಗೆ 8 ಹೊಲಿಗೆ ಹಾಕಲಾಗಿದ್ದು, ಪ್ರಾಣಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ದೂರು ದಾಖಲಿಸಿಕೊಂಡಿರುವ ದಿಬ್ಬೂರಹಳ್ಳಿ ಪೊಲೀಸರು ಆರೋಪಿ ಗಂಗ್ರೋತ್ರಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಗಂಗರಾಜು ಪಾತ್ರ ಕುರಿತಂತೆ ತನಿಖೆ ನಡೆಸಲು ಈತನನ್ನೂ ಕೂಡಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Discussion about this post