ಕಲಬುರಗಿ : ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಪೊಲೀಸ್ ಪೇದೆಯೊಬ್ಬರ ಪುತ್ರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮೃತನನ್ನು ವಿದ್ಯಾನಗರ ನಿವಾಸಿ, 27 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಈತನ ತಂದೆ ತಂದೆ ಚಂದ್ರಕಾಂತ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿಷೇಕ್ ಗುರುವಾರ ಜಿಮ್ ಗೆ ಹೋಗುವುದಾಗಿ ಮನೆಯಿಂದ ಬೈಕ್ ನಲ್ಲಿ ಹೊರಟಿದ್ದಾನೆ. ಈ ವೇಳೆ ದುಷ್ಕರ್ಮಿಗಳ ತಂಡ ಆತನನ್ನು ಬೆನ್ನಟ್ಟಿದ್ದಾರೆ. ವಿಷಯ ಗೊತ್ತಾಗುತ್ತಲೇ ಬೈಕ್ ಬಿಟ್ಟು ಬಸ್ ನಿಲ್ದಾಣದೊಳಗೆ ಅಭಿಷೇಕ್ ಓಡಿ ಬಂದಿದ್ದಾನೆ. ಅಟ್ಟಿಸಿಕೊಂಡು ಬಂದ ದುಷ್ಕರ್ಮಿಗಳು ಸಾರ್ವಜನಿಕರ ಎದುರೇ ಮಾರಕಾಸ್ತ್ರಗಳಿಂದ ಅಭಿಷೇಕ್ ಮೇಲೆ ದಾಳಿ ನಡೆಸಿ ಕೊಚ್ಚಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post