ಬೆಂಗಳೂರು : ಕೇವಲ 20 ರೂಪಾಯಿಗಾಗಿ ಗೆಳೆಯನನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಕೊಲೆಯಾದವನನ್ನು ಅಸ್ಸಾಂ ಮೂಲದ ಸಂಜಯ್ ಅಲಿಯಾಸ್ ಅಸ್ಸಾಮಿ (30) ಎಂದು ಗುರುತಿಸಲಾಗಿದೆ.
5 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ದೀಪಕ್, ಜಾರ್ಖಂಡ್ ನ ಹೇಮಂತ್, ತಮಿಳುನಾಡಿನ ಮಾದೇಶ ಹಾಗೂ ಕೊಲೆಯಾದ ಅಸ್ಸಾಮಿ ಜೀವನ ನಿರ್ವಹಣೆಗಾಗಿ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು. ಇದೇ ತಿಂಗಳ 13 ರಂದು ಅಂದ್ರೆ ಸಪ್ಟಂಬರ್ 13 ರಂದು ಈ ನಾಲ್ವರು ಜೊತೆಗೆ ಮದ್ಯ ಸೇವಿಸಿದ್ದರು. ಈ ವೇಳೆ ದೀಪಕ್ ತಾನು ಕೊಟ್ಟಿದ್ದ 20 ರೂಪಾಯಿ ಹಿಂತಿರುಗಿಸುವಂತೆ ಅಸ್ಸಾಮಿಯನ್ನು ಕೇಳಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜೊತೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಉಳಿದವರು ದೀಪಕ್ ಬೆಂಬಲಕ್ಕೆ ನಿಂತಿದ್ದಾರೆ. ಮಾತ್ರವಲ್ಲದೆ ಎಣ್ಣೆ ಏಟಿನಲ್ಲಿ ಮನಸ್ಸಿಗೆ ಬಂದಂತೆ ಸಂಜಯ್ ಮೇಲೆ ಹಲ್ಲೆ ನಡೆಸಿದ್ದಾರೆ, ಕೊಂದು ಪರಾರಿಯಾಗಿದ್ದಾರೆ.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಕ್ಯಾಮಾರ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Discussion about this post