ಭೋಪಾಲ್ : ಪತ್ನಿಯ ಶೀಲ ಶಂಕಿಸಿದ ಪತಿರಾಯನೊಬ್ಬ, ಪತ್ನಿಯ ಖಾಸಗಿ ಅಂಗವನ್ನು ಸೂಜಿ ದಾರ ಬಳಸಿ ಹೊಲಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
64 ವರ್ಷದ ಪತಿಗೆ 55 ವರ್ಷದ ಪತ್ನಿಯ ಮೇಲೆ ಅದ್ಯಾಕೋ ಅನುಮಾನದ ಭೂತ ಹಿಡಿದಿತ್ತು. ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಭಾವಿಸಿದ್ದ ಈತ ಸೂಜಿ ದಾರ ಬಳಸಿ ಖಾಸಗಿ ಭಾಗಕ್ಕೆ ಹೊಲಿಗೆ ಹಾಕಿದ್ದಾನೆ. ಘಟನೆಯ ನಂತರ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ ಮಹಿಳೆ ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾಳೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ವೈದ್ಯರು ಹೊಲಿಗೆಯನ್ನು ತೆಗೆದಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಈ ನಡುವೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಸೂಜಿ ಹಾಗೂ ದಾರವನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಪತ್ನಿಯ ಖಾಸಗಿ ಭಾಗಕ್ಕೆ ಹೊಲಿಗೆ ಹಾಕಿದ ಪತಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Discussion about this post