ಬೆಂಗಳೂರು : ಈ ವುಹಾನ್ ವೈರಸ್ ಸೃಷ್ಟಿಸಿದ ಆವಾಂತರ ಒಂದಲ್ಲ, ಎರಡಲ್ಲ. ಅನೇಕ ಮಂದಿಯನ್ನು ಬೀದಿಗೆ ತಳ್ಳಿರುವ ಚೈನಾ ವೈರಸ್ ಲಸಿಕೆಗಳಿಗೂ ಬಗ್ಗುವ ಲಕ್ಷಣ ಗೋಚರಿಸುತ್ತಿಲ್ಲ. ಈ ಪಾಪಿ ವೈರಸ್ ಹಲವರ ಪ್ರಾಣ ಮಾತ್ರ ತಿಂದಿಲ್ಲ, ಉದ್ಯೋಗವನ್ನೂ ಕಸಿದುಕೊಂಡಿದೆ. ಬದುಕಿನಲ್ಲಿ ಛಲವಿದ್ರೆ ಏನೂ ಬೇಕಾದ್ರು ಸಾಧಿಸಬಹುದು ಅನ್ನುವ ಛಲಗಾರರನ್ನೇ ಈ ವೈರಸ್ ಸೋಲಿಸಿದ್ರೆ ಅಂದ್ರೆ ಲೆಕ್ಕ ಹಾಕಿ.
ಹೀಗೆ ಕೊರೋನಾ ಕಾರಣದಿಂದ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕವರು ಹೇಗೋ ಅರೆ ಹೊಟ್ಟೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕೊರೋನಾ ಕಾರಣದಿಂದ ಕೆಲಸ ಕಳೆದುಕೊಂಡ ಐಟಿ ಮ್ಯಾನೇಜರ್ ಒಬ್ಬ ಕಳ್ಳನಾದ ದುರಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಂಬಿಎ ಪದವೀಧರ ಗೌಸ್, ಐಟಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದರು. ಕೊರೋನಾ ಕಾರಣದಿಂದ ಇದ್ದ ಕೆಲಸವನ್ನು ಕಳೆದುಕೊಳ್ಳಬೇಕಾಯ್ತು. ಒಂದನೇ ಅಲೆ ಮುಗಿದರೆ ಎಲ್ಲವೂ ಸರಿಯಾಗುತ್ತದೆ ಅಂದುಕೊಂಡ್ರೆ ಏನೂ ಆಗಲಿಲ್ಲ. ಕೆಲಸ ಕಳೆದುಕೊಂಡ ಬಳಿಕ ಬೇರೆ ಉದ್ಯೋಗಕ್ಕೂ ಪ್ರಯತ್ನಿಸಿದರು ಆದರೆ ಅದ್ಯಕೋ ಒಗ್ಗಲಿಲ್ಲ.
ಈ ವೇಳೆ ಮೈಮೇಲಿದ್ದ 35 ಸಾವಿರ ತುಂಬಾ ಕಾಟ ಕೊಡಲಾರಂಭಿಸಿತು. ಸಾಲ ಕೊಟ್ಟವರು ಪದೇ ಪದೇ ಹಣ ಕೇಳತೊಡಗಿದರು. ಎಲ್ಲಿಂದ ಕಾಸು ಹೊಂದಿಸುವುದು ಎಂದು ಗೊತ್ತಾಗದೆ ಇದ್ದಾಗ ಹೊಳೆದದ್ದು ಸರಗಳ್ಳತನ. ಹೀಗಾಗಿ ಜಯನಗರದ ಪೂರ್ಣಿಮಾ ಮದುವೆ ಚೌಟ್ರಿ ಮುಂದೆ ಬರುತ್ತಿದ್ದ ಮಹಿಳೆಯೊಬ್ಬರ ಸರ ಎಗರಿಸಿದ್ದ ಗೌಸ್ ಪರಾರಿಯಾಗಿದ್ದ.
ಆದರೆ ವೃತ್ತಿಯಲ್ಲಿ ಕಳ್ಳನಾಗಿಲ್ಲದೆ ಇರುವ ಕಾರಣ ಗೌಸ್ ಬೇಗನೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಠಾಣೆಯಲ್ಲಿ ವಿಚಾರಣೆ ಮಾಡಿದ್ರೆ ಕೊರೋನಾ ಕಾರಣದಿಂದ ಕೆಲಸ ಹೋಗಿದೆ ಸಾರ್, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಬೇರೆ ಕಡೆ ಕೆಲಸಕ್ಕೆ ಟ್ರೈ ಮಾಡ್ತಾ ಇದ್ದೀನಿ. ಅಷ್ಟು ಹೊತ್ತಿಗೆ ಸಾಲಗಾರರ ಕಾಟ ಜಾಸ್ತಿ ಆಯ್ತು, ಹೀಗಾಗಿ ಸರಗಳ್ಳತನ ಮಾಡಿದೆ ಅಂದಿದ್ದಾರೆ.
Discussion about this post