ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಅನ್ನುವುದೊಂದು ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ ಅಂದ್ರೆ ತಪ್ಪಿಲ್ಲ. ಸೆಲ್ಫಿಯ ಹುಚ್ಚಿಗೆ ಬಿದ್ದವರು ಸರ್ಕಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಎಲ್ಲಿ ಯಾವಾಗ ಸೆಲ್ಫಿ ತೆಗೆಯಬೇಕು ಅನ್ನುವ ಜ್ಞಾನವಿಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಕಮೆಂಟ್ ಆಸೆಗೆ ಬಿದ್ದು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಜೈಪುರ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್ನಲ್ಲೂ ಹೀಗೆ ಆಗಿದೆ. ಭಾನುವಾರ ರಾತ್ರಿ ಸಿಡಿಲು ಬಡಿದು 11 ಜನರು ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ನಡೆದಿರುವುದು ಸೆಲ್ಫಿ ತೆಗೆದುಕೊಳ್ಳುವಾಗ ಅನ್ನುವುದು ಗಮನಾರ್ಹ ಅಂಶ.
ರಾಜಸ್ತಾನ ರಾಜಧಾನಿ ಜೈಪುರದ ಅಮರ್ ಪ್ಯಾಲೆಸ್ನ ವಾಚ್ ಟವರ್ ಮೇಲೆ ಹತ್ತಿದ ಜನ ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಮಳೆಯ ಜೊತೆಗೆ ಸಿಡಿಲು ಬರುತ್ತಿದ್ದರೂ ಜನರಿಗೆ ಪ್ರಾಣಕ್ಕಿಂತ ಸೆಲ್ಫಿಯೇ ಮುಖ್ಯವಾಗಿತ್ತು. ಹೀಗಾಗಿ ಈ ವೇಳೆ ಸಿಡಿಲು ಬಡಿದು 11 ಜನ ಮೃತಪಟ್ಟಿದ್ದಾರೆ. ಸಿಡಿಲು ಹೊಡೆದ ರಭಸಕ್ಕೆ ಕೆಲವರು ವಾಚ್ ಟವರ್ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ. ಸಿಡಿಲು ಬಡಿದ ಸಂದರ್ಭದಲ್ಲಿ ವಾಚ್ ಟವರ್ ನಲ್ಲಿ 27 ಜನರಿದ್ದರು ಎಂದು ಗೊತ್ತಾಗಿದೆ.
ಈ ನಡುವೆ ಘಟನೆ ಬಗ್ಗೆ ಸಂತಾಪ ಸೂಚಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
Discussion about this post