ಬೆಂಗಳೂರು : ಸುಲಭವಾಗಿ ಹಣ ಸಂಪಾದಿಸಬಹುದು ಅನ್ನುವ ಪ್ರಿಯತಮನ ಮಾತು ಕೇಳಿ ಬೆಂಗಳೂರಿನಲ್ಲಿ ಗಾಂಜಾ ವ್ಯವಹಾರ ಪ್ರಾರಂಭಿಸಿದ ಎಂಜಿನಿಯರ್ ಪದವೀಧರೆಯೊಬ್ಬಳು ಜೈಲು ಸೇರಿದ್ದಾಳೆ.
ಅಂಧ್ರ ಪ್ರದೇಶ ಶ್ರೀಕಾಕುಳಂನ ರೇಣುಕಾಳಿಗೆ ತಮಿಳುನಾಡಿನ ಚೆನೈನಲ್ಲಿ ಎಂಜಿನಿಯರಿಂಗ್ ಓದುವಾಗ ಅಂಧ್ರದ ಕಡಪ ಜಿಲ್ಲೆಯ ಸಿದ್ದಾರ್ಥ್ ಪರಿಚಯವಾಗಿದೆ. ಸಹಪಾಠಿಗಳಾಗಿದ್ದವರು ಪ್ರೇಮಿಗಳಾಗಿದ್ದಾರೆ. ಈ ವಿಷಯ ರೇಣುಕಾ ಮನೆಯವರಿಗೆ ಗೊತ್ತಾಗಿ ಮಗಳಿಗೆ ಬುದ್ದಿ ಮಾತು ಹೇಳಿದ್ದರು. ಆದರೆ ಮನೆಯವರಿಂದ ಪ್ರೀತಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಇಂಜಿನಿಯರಿಂಗ್ ಮುಗಿಸಿ ಚೆನೈ ನಲ್ಲೇ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದಾಳೆ. ಅಗ್ಲೇ ಮನೆಯವರ ಮಾತು ಕೇಳಿದ್ರೆ ಏನಾಗುತ್ತಿರಲಿಲ್ಲ.
ಈ ನಡುವೆ ಓದು ಮುಗಿಸಿ ಆಂಧ್ರಕ್ಕೆ ಮರಳಿದ್ದ ಸಿದ್ದಾರ್ಥ್, ಮೋಜಿನ ಜೀವನದ ಸಲುವಾಗಿ ಅಡ್ಡದಾರಿ ತುಳಿದಿದ್ದ. ಕಾಸು ಸಂಪಾದಿಸಲು ಮಾದಕ ವಸ್ತು ಜಾಲದ ಸಂಪರ್ಕ ಬೆಳೆಸಿದ್ದ.
ಈ ನಡುವೆ ಇವರಿಬ್ಬರ ಪ್ರೀತಿ ಮುಂದುವರಿದಿತ್ತು. ಹೀಗಾಗಿ ರೇಣುಕಾಳ ಮನವೊಲಿಸಿ ನಾವೊಂದು ಹೊಸ ಬ್ಯುಸಿನೆಸ್ ಶುರು ಮಾಡೋಣ ಇದರಿಂದ ಕೈ ತುಂಬಾ ಕಾಸು ಸಂಪಾದಿಸಬಹುದು. ಬಳಿಕ ಮದುವೆಯಾಗೋಣ ಅಂದಿದ್ದ. ಪ್ರಿಯತಮನ ಮಾತಿಗೆ ಮರಳಾದವಳು, ಕಂಪನಿ ಕೆಲಸ ತೊರೆದು ಗಾಂಜಾ ಗ್ಯಾಂಗ್ ಸೇರಿದ್ದಳು.
ಈ ನಡುವೆ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗಾಂಜಾ ಸೇಲ್ ಮಾಡಲು ಸಿದ್ದಾರ್ಥ್ ರೇಣುಕಾಳನ್ನು ಬೆಂಗಳೂರಿಗೆ ಕಳುಹಿಸಿದ್ದ. ಮಾರತಹಳ್ಳಿ ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ ರೇಣುಕಾ, ಪ್ರಿಯತಮ ಕಳುಹಿಸುತ್ತಿದ್ದ ಗಾಂಜಾವನ್ನು ಚಿಕ್ಕಪೊಟ್ಟಣಗಳಲ್ಲಿ ತುಂಬಿ, ಸಿದ್ದಾರ್ಥ್ ಪರಿಚಯ ಮಾಡಿಕೊಟ್ಟಿದ್ದ ಸುದಾಂಶು ಅನ್ನುವವನಿಗೆ ತಲುಪಿಸುತ್ತಿದ್ದಳು. ಈ ನಡುವೆ ಸದಾಶಿವನಗರದಲ್ಲಿ ಗಾಂಜಾ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. 50 ಗ್ರಾಂ ಗಾಂಜಾ 2ರಿಂದ 3 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಒಂದು ಕೆಜಿಗೆ 20 ರಿಂದ 30 ಸಾವಿರ ರೂ ಆದಾಯವನ್ನು ಗಳಿಸುತ್ತಿದ್ದರು ಎಂದು ಗೊತ್ತಾಗಿದೆ.
Discussion about this post