ಬೆಂಗಳೂರು : ಬಾಂಗ್ಲಾ ದೇಶದಿಂದ ಪಶ್ಚಿಮ ಬಂಗಾಳ ಮೂಲಕ ಅಕ್ರಮವಾಗಿ ನುಸುಳುವ ದುಷ್ಕರ್ಮಿಗಳು ಭಾರತದಲ್ಲಿ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ. ರಾಜಕೀಯ ಲಾಭದ ಸಲುವಾಗಿ ಪಶ್ಟಿಮ ಬಂಗಾಳ ಸರ್ಕಾರ ಅಕ್ರಮ ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳಲು ಸಿದ್ದವಿಲ್ಲ.
ಪಶ್ಚಿಮ ಬಂಗಾಳ ಮಾತ್ರವಲ್ಲ ನಮ್ಮ ಕರ್ನಾಟಕ ಸರ್ಕಾರವೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ನೆಲೆಸಿದ್ದಾರೆ. ಈ ಪೈಕಿ ಅನೇಕರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ಮನಸ್ಸು ಮಾಡಿದರೆ ಮತ್ತೆ ಅವರನ್ನು ಬಾಂಗ್ಲಾಗೆ ಸೇರಿಸಬಹುದು.
ಹೀಗೆ ಬಾಂಗ್ಲಾದಿಂದ ಪಶ್ಚಿಮ ಬಂಗಾಳ ಮೂಲಕ ಎಂಟ್ರಿ ಕೊಟ್ಟ ಸಂಜೀವ್ ಸಾಹ ಮತ್ತು ಶಿಭಂಕರ್ ಸಿಲ್ ಬೆಂಗಳೂರಿಗೆ ಕಾಲಿಟ್ಟಿದ್ದರು. ಪೀಣ್ಯ, ಬಾಗಲಗುಂಟೆ ಪ್ರದೇಶದಲ್ಲಿ ಚಿಂದಿ ಆಯುತ್ತಿದ್ದ ಅವರು ದಿನಕ್ಕೆ 500 ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಚಿಂದಿ ಆಯುತ್ತಿದ್ದ ಅವರಿಗೆ ದಿಢೀರ್ ಶ್ರೀಮಂತರಾಗುವ ಕನಸು ಕಂಡಿದೆ. ಹೀಗಾಗಿ ಲಾಕ್ ಡೌನ್ ಸಮಯದಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ್ದಾರೆ.
ಇದಕ್ಕಾಗಿ ಯಾರೂ ಇಲ್ಲದ ಮನೆಯನ್ನು ಟಾರ್ಗೇಟ್ ಮಾಡಿದ್ದ ಇವರಿಬ್ಬರಿಗೆ MHAR ಬಡಾವಣೆಯ ಮನೆಯೊಂದು ಕಂಡಿದೆ. ಹೀಗಾಗಿ ಅಕ್ಕಪಕ್ಕದವರ ಚಲನವನಗಳನ್ನು ಗಮನಿಸಿ ಮೇ 2 ರಂದು ಬೀಗ ಒಡೆದಿದ್ದಾರೆ. ಮೊದಲ ಪ್ರಯತ್ನದಲ್ಲೇ 90 ಲಕ್ಷ ರೂಪಾಯಿ ಕೈಸೇರಿದೆ.
ಈ ನಡುವೆ ಮನೆಯ ಬೀಗ ಮುರಿದಿರುವುದನ್ನು ಗಮನಿಸಿದ ನೆರೆ ಮನೆಯವರು ವಿಷಯವನ್ನು ಮಾಲೀಕರಿಗೆ ಮುಟ್ಟಿಸಿದ್ದಾರೆ. ಅವರು ಬಂದು ನೋಡಿದರೆ ಮನೆ ಮಗನ ವೈದ್ಯಕೀಯ ಶಿಕ್ಷಣಕ್ಕಾಗಿ ತಂದಿಟ್ಟಿದ್ದ 90 ಲಕ್ಷ ರೂಪಾಯಿ ನಾಪತ್ತೆ. ತಕ್ಷಣ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಕೂಡಾ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದರು. ಆದರೆ ಫಲಿತಾಂಶ ಶೂನ್ಯ.
ಈ ನಡುವೆ ಚಿತ್ತೂರು ಪೊಲೀಸ್ ಠಾಣೆಯಿಂದ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಬಂದ ಕರೆ ಬಾಗಲಕುಂಟೆ ಪೊಲೀಸರ ಕಾರ್ಯಾಚರಣೆಗೆ ಜೀವ ಕೊಟ್ಟಿದೆ. ಇದೀಗ ಚಿತ್ತೂರಿಗೆ ದೌಡಾಯಿಸಿದ್ದು ಆರೋಪಿಗಳನ್ನು ಕರೆ ತಂದಿದ್ದಾರೆ.
ಕಳ್ಳರು ಸಿಕ್ಕಿದು ಹೇಗೆ..?
ಚಿಂತಾಮಣಿ ಮೂಲದ ಮನೆ ಮಾಲೀಕರು ಲಾಕ್ ಡೌನ್ ಹಿನ್ನಲೆಯಲ್ಲಿ ಮೆನಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಹೋಗುವ ವೇಳೆ 90 ಲಕ್ಷ ರೂಪಾಯಿ ನಗದನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು.
ಈ ನಡುವೆ ಕಳ್ಳತನ ಮಾಡಿದ ಬಾಂಗ್ಲಾ ಖದೀಮರು, ದೊಡ್ಡ ಮೊತ್ತ ಸಿಕ್ಕ ಖುಷಿಯಲ್ಲಿ ಕೋಲ್ಕತಾ ಸೇರಲು ನಿರ್ಧರಿಸಿದ್ದಾರೆ. ಕಳ್ಳತನ ಬಳಿಕ ವಾಹನ ಹತ್ತಿದ್ರೆ ಪೊಲೀಸರು ಹಿಡಿಯುತ್ತಾರೆ ಎಂದು ಪೀಣ್ಯಾದಿಂದ ಹೊಸಕೋಟೆ ತನಕ ನಡೆದುಕೊಂಡು ಹೋಗಿದ್ದಾರೆ. ಬಳಿಕ ಹೊಸಕೋಟೆಯಲ್ಲಿ ಕೋಲ್ಕತಾಗೆ ತೆರಳಲು ಕಾರು ಬುಕ್ ಮಾಡಿದ್ದಾರೆ. ಬಳಿಕ ಮುಳಬಾಗಿಲು ಮೂಲಕ ಚಿತ್ತೂರು ತಲುಪಿದ್ದಾರೆ.
ಈ ವೇಳೆ ಪಲನಮೇರು ಸಮೀಪ ಪೊಲೀಸರು ಲಾಕ್ ಡೌನ್ ಹಿನ್ನಲೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಚಿಂದಿ ಆಯುವವರ ಕಳ್ಳತನದ ಕಥೆ ಬೆಳಕಿಗೆ ಬಂದಿದೆ. ಇದೀಗ ಬೆಂಗಳೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 90 ಲಕ್ಷದಲ್ಲಿ ಕೇವಲ 1600 ರೂಪಾಯಿ ಮಾತ್ರ ಖರ್ಚಾಗಿರುವುದು ಗೊತ್ತಾಗಿದೆ.
Discussion about this post