ಕೊಡಗು : ಇತ್ತೀಚಿನ ದಿನಗಳಲ್ಲಿ ಕೊರೋನಾ ವಿಚಾರದಲ್ಲಿ ಸಮಾಜ ಗಣ್ಯ ವ್ಯಕ್ತಿಗಳು ಅನ್ನಿಸಿಕೊಂಡವರೇ ಕಳ್ಳಾಟವಾಡಲಾರಂಭಿಸಿದ್ದಾರೆ. ಸರ್ಕಾರಿ ವೈದ್ಯರೇ ಅಕ್ರಮವಾಗಿ ಲಸಿಕೆ ನೀಡುತ್ತಿದ್ದಾರೆ. ದೇವರಂತೆ ಕಾಣುವ ವೈದ್ಯರು ರೆಮ್ಡಿಸೀವರ್ ಮಾರಾಟದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದೀಗ ಪತ್ರಕರ್ತರ ಸರದಿ.
ಕೇರಳಕ್ಕೆ ಹೋಗಿ ಬರುವವರಿಗೆ ಕೊರೋನಾ ನಕಲಿ ನೆಗೆಟಿವ್ ಸರ್ಟಿಫಿಕೆಟ್ ತಯಾರಿಸಿ ಕೊಡುತ್ತಿದ್ದ ಪತ್ರಕರ್ತನನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿಜಯವಾಣಿ ಪತ್ರಿಕೆಯ ವರದಿಗಾರನಾಗಿದ್ದು, ಅಬ್ಧುಲ್ ಅಜೀಜ್ ಎಂದು ಗುರುತಿಸಲಾಗಿದೆ.
ದೇಶದ್ಯಾಂತ ಕೋವಿಡ್-19 ಪ್ರಕರಣಗಳು ಸಾಂಕ್ರಾಮಿಕವಾಗಿ ಹರಡುತ್ತಿರುವ ಕಾರಣ, ರಾಜ್ಯದ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ನಡುವೆ ಸಂಚರಿಸುವ ವಾಹನ ಮತ್ತು ಅದರಲ್ಲಿ ಬರುವ ಪ್ರಯಾಣಿಕರು ಹಾಗೂ ಕಾಲು ನಡಿಗೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಕರೋನಾ RTPCR ನೆಗೆಟಿವ್ ವರದಿ ಹೊಂದಿರಬೇಕು ಅನ್ನುವ ಆದೇಶ ಜಾರಿಯಲ್ಲಿದೆ.
ಅದರಂತೆ ದಿನಾಂಕ 24-5-2021 ರಂದು ಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಬಿ.ವಿ. ಹರೀಶ್ ಕುಮಾರ್ ಹಾಗು ಆರೋಗ್ಯ ಇಲಾಖೆಯ ನಾಗೇಂದ್ರ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ, ಸಂಜೆ ಸುಮಾರು 4.45 ಗಂಟೆಗೆ, ಕೇರಳ ರಾಜ್ಯ ಕಡೆಯಿಂದ ಬಂದ KA-12-B-4623 ನೋಂದಣಿಯ ಒಂದು ಗೂಡ್ಸ್ ವಾಹನ ಬಂದಿದ್ದು ಪರಿಶೀಲಿಸಿದಾಗ ಲಾರಿ ಚಾಲಕ ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಜಂಶೀರ್ ತೋರಿಸಿದ ಕರ್ನಾಟಕ ಸರಕಾರದ ಕೋವಿಡ್ RTPCR ನೆಗೆಟಿವ್ ವರದಿ ರಿಪೋರ್ಟ್ ಸಂಶಯಾಸ್ಪದವಾಗಿತ್ತು.
ಹೀಗಾಗಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದಾಗ ಆ ವರದಿ ನಕಲಿ ಎಂದು ಗೊತ್ತಾಗಿದೆ. ತಕ್ಷಣ ಚಾಲಕ ಜಂಶೀರ್ ನನ್ನು ವಶಕ್ಕೆ ಪಡೆದ ಪೊಲೀಸರು ಈ RTPCR ವರದಿಯನ್ನು ಸಿದ್ದಾಪುರದ ವಿಜಯವಾಣಿ ಪತ್ರಿಕೆ ವರದಿಗಾರ ಅಬ್ದುಲ್ ಅಜೀಜ್ ತಯಾರಿಸಿ ಕೊಟ್ಟಿರುವುದಾಗಿ ಹೇಳಿದ್ದಾನೆ.
ಅದರಂತೆ ಮಡಿಕೇರಿ ನಗರ ಸರ್ಕಲ್ ಇನ್ಸ್ ಪೆಕ್ಟರ್ ಅನೂಪ ಮಾದಪ್ಪ ಹಾಗು ಸಿಬ್ಬಂದಿಯವರು ಸಿದ್ದಾಪುರದ ಪತ್ರಕರ್ತ ಅಬ್ದುಲ್ ಅಜೀಜ್ ನನ್ನು ಬಂಧಿಸಿದ್ದಾರೆ.
Discussion about this post