ಚಲಿಸುತ್ತಿದ್ದ ಬಸ್ಸೊಂದು ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 9 ಪ್ರಯಾಣಿಕರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮಾಳ ಗ್ರಾಮದ ಸಮೀಪ ಶನಿವಾರ ರಾತ್ರಿ ನಡೆದಿದೆ.
ಮೈಸೂರಿನಿಂದ ಮಂಗಳೂರಿಗೆ ಪ್ರವಾಸಕ್ಕೆ ಹೊರಟ ಬಸ್ಸು ಕಾರ್ಕಳದ ಮಾಳ ಘಾಟ್ ರಸ್ತೆಯಲ್ಲಿ ವೇಗವಾಗಿ ಬಂದ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡು ಬಂಡೆಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದರು.
ಮೃತರನ್ನು ಮೈಸೂರಿನ ನಂಜನಗೂಡು ಸಮೀಪದ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ನೌಕರರು ಎಂದು ಗುರುತಿಸಲಾಗಿದೆ. ಈ ಕಂಪನಿಯ ನೌಕರರು ಫೆಬ್ರುವರಿ 14ರಂದು ಮೈಸೂರಿನಿಂದ ಪ್ರವಾಸ ಹೊರಟು ಶೃಂಗೇರಿ, ಹೊರನಾಡು, ಕಳಸ ಸುತ್ತಾಡಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಗೆ ಸಮುದ್ರ ನೋಡಲು ಹೊರಟಿದ್ದರು. ಆದರೆ ಮಾರ್ಗಮಧ್ಯದಲ್ಲೇ ಒಂಬತ್ತು ಮಂದಿಯ ಪ್ರವಾಸ ದುರಂತ ಕಂಡಿದೆ.
ಶನಿವಾರ ಸಂಜೆ ಐದು ಮೂವತ್ತರ ಸುಮಾರಿಗೆ ಖಾಸಗಿ ಮಿನಿ ಬಸ್ ಘಾಟಿಯಿಂದಿಳಿದು ಬರುತ್ತಿದ್ದಾಗ ಎಡಗಡೆಯ ತಡೆಗೋಡೆಗೆ ಗುದ್ದಿದೆ. ಚಾಲಕ ಒಂದೇ ಸಮನೆ ಬಲಕ್ಕೆ ತಿರುಗಿಸಿದ್ದರಿಂದ ಬಂಡೆಗೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ 9 ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ.
ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಕಳದ ಸಿಟಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಸ್ಪಿ, ಎಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಗಳ ತಂಡ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದು ಗಾಯಾಳುಗಳು ಮತ್ತು ಮೃತರ ವಿವರ ಸಂಗ್ರಹಿಸಿ ಕುಟುಂಬಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಬಸ್ ಮುಂಭಾಗ ಕುಳಿತಿದ್ದ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.
ಒಂಬತ್ತು ಮೃತರ ಪೈಕಿ ಎಂಟು ಮಂದಿಯ ಗುರುತು ಪತ್ತೆಯಾಗಿದ್ದು ಮೃತರನ್ನು ಗುರುತಿಸಲಾಗಿದೆ. ಅನಜ್ಞಾ (21) ರಂಜಿತಾ ಪಿ, ಯೋಗೆಂದ್ರ (21) ರಾಧಾ ರವಿ(22), ಪ್ರೀತಂ ಗೌಡ ಶಾರೋಲ್(21), ಅಡುಗೆ ಸಹಾಯಕ ಬಸವರಾಜ್ (22), ಬಸ್ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ. ಶವಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಭಾನುವಾರ ಮೈಸೂರಿನಿಂದ ಮೃತರ ಕುಟುಂಬದವರು ಬಂದ ನಂತರ ಶವ ಪರೀಕ್ಷೆ ನಡೆಸಿ ಹಸ್ತಾಂತರಿಸಲಾಗುತ್ತದೆ. ಎಸ್.ಕೆ.ಬಾರ್ಡರ್ ಬಳಿಯ ಅಬ್ಬಾಸ್ ಕಟ್ಟಿಂಗ್ ಬಳಿ ಅಪಘಾತ ನಡೆದಿದ್ದು ಈ ಭಾಗದಲ್ಲಿ ತುಂಬಾ ಕಿರಿದಾದ ತಿರುವಿನ ರಸ್ತೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Discussion about this post