ಉಡುಪಿ : ದೇಶವನ್ನೇ ತಲ್ಲಣಗೊಳಿಸಿದ್ದ ಉದ್ಯಮಿ ಇಂದ್ರಾಳಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಇದೇ 29 ರಂದು ಪ್ರಕಟಣಗೊಳ್ಳಲಿದೆ.
ಆರೋಪಿಗಳು 2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದರು.
ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಆಗ ಸಿಕ್ಕಿದ್ದು ಅಘಾತಕಾರಿ ಅಂಶ. ಭಾಸ್ಕರ್ ಶೆಟ್ಟಿಯನ್ನು ಪತ್ನಿ ರಾಜೇಶ್ವರಿ, ಮಗ ನವನೀತ್ ಹಾಗೂ ರಾಜೇಶ್ವರಿಯ ಪ್ರಿಯಕರ ನಿರಂಜನ್ ಭಟ್ ಸೇರಿ ಕೊಂದಿದ್ದರು. ಇದಾದ ಬಳಿಕ ಆಗಸ್ಟ್ .7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್ನನ್ನು ಬಂಧಿಸಿದ್ದ ಪೊಲೀಸರು ಆಗಸ್ಟ್ 8ರಂದು ನಿರಂಜನ್ ಭಟ್ ನನ್ನು ಬಂಧಿಸಿದ್ದರು.
ಆ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, 2021ರ ಮಾ.30ರಿಂದ ಆರಂಭದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಅಂತಿಮ ವಾದ ಮಂಡಿಸಿದ್ದರು, ಬಳಿಕ ಆರೋಪಿಗಳ ಪರ ವಕೀಲರು ಪ್ರತಿವಾದವನ್ನು ಮಂಡಿಸಿದ್ದರು.
ಇದೀಗ ಕೊಲೆ ಪ್ರಕರಣದ ವಾದ ಪ್ರತಿವಾದ ಪೂರ್ಣಗೊಂಡಿದ್ದು, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಂತಿಮ ತೀರ್ಪನ್ನು ಮೇ 29ರಂದು ಪ್ರಕಟಿಸುವುದಾಗಿ ಹೇಳಿದೆ.
ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಈಗಾಗಲೇ ಜಾಮೀನು ದೊರೆತ್ತಿದ್ದು, ಮಾಡಬಾರದ ಕೆಲಸ ಮಾಡಿದ ಕರ್ಮಕ್ಕೆ ಮತ್ತೆ ಪೊಲೀಸ್ ಕೇಸ್ ದಾಖಲಾಗಿದೆ. ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ.
ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಈಗಾಗಲೇ ತೀರಿಕೊಂಡಿದ್ದು, ಮತ್ತೊಬ್ಬ ಆರೋಪಿ ರಾಘವೇಂದ್ರ ಜಾಮೀನು ಪಡೆದುಕೊಂಡಿದ್ದಾರೆ.
Discussion about this post