ಹೊಸೂರು : ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕಳ್ಳ ನೋಟುಗಳ ಮೇಲೆ ನಿಯಂತ್ರಣ ಸಾಧಿಸಬೇಕು ಅನ್ನುವ ಉದ್ದೇಶದಿಂದ 500 ಹಾಗೂ ಸಾವಿರ ಮುಖ ಬೆಲೆ ನೋಟುಗಳ ಮೇಲೆ ನಿಷೇಧ ಹೇರಿ 2 ಸಾವಿರ ರೂ ಮುಖ ಬೆಲೆಯ ನೋಟುಗಳನ್ನು ಪರಿಚಯಿಸಲಾಯ್ತು. ಜೊತೆಗೆ ಕಪ್ಪು ಹಣದ ಮೇಲೆ ನಿಯಂತ್ರಣ ತರುವ ಉದ್ದೇಶವೂ ಇದರಲ್ಲಿತ್ತು. ಅದರೆ ಕೆಲ ಬ್ಯಾಂಕ್ ಮ್ಯಾನೇಜರ್ ಗಳ ಖತರ್ನಾಕ್ ಕಾರ್ಯದಿಂದ ಅದು ನಿರೀಕ್ಷಿತ ಫಲ ನೀಡಿಲ್ಲ.
ಈ ನಡುವೆ ಎರಡು ಸಾವಿರ ರೂಪಾಯಿ ನೋಟು ಸಿಕ್ಕಾಪಟ್ಟೆ ಸೇಫ್, 2 ಸಾವಿರ ರೂ ಮುಖ ಬೆಲೆ ಕಳ್ಳ ನೋಟು ತಯಾರಿಸಲು ಸಾಧ್ಯವೇ ಇಲ್ಲ ಎಂದು ಹೇಳಲಾಗಿತ್ತು. ಆದರೆ ತಮಿಳುನಾಡಿನಲ್ಲಿ ನಡೆದಿರುವ ಕಾರ್ಯಾಚರಣೆ ಎಲ್ಲಾ ಕಥೆಗಳನ್ನು ಕತೆಯನ್ನಾಗಿಸಿದೆ.
ಕೆಲ ದಿನಗಳ ಹಿಂದೆ ಕೃಷ್ಣಗಿರಿ ನಗರದ ರಾಯಕೋಟ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಐದಾರು ಕಾರುಗಳು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಕಾರನ್ನು ತೆಗೆದುಕೊಂಡು ಸ್ಪಲ್ಪ ದೂರಕ್ಕೆ ಹೋಗಿ ಮತ್ತೆ ರಹಸ್ಯ ಮಾತುಕತೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಸುತ್ತುವರಿದು ಪ್ರಶ್ನಿಸಿದ್ದಾರೆ. ಆಗ ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟಿದ್ದಾರೆ. ಹೀಗಾಗಿ 11 ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದರೆ ನಕಲಿ ನೋಟು ಜಾಲ ಬೆಳಕಿಗೆ ಬಂದಿದೆ. ಹೀಗಾಗಿ ಆರೋಪಿಗಳ ಮಾಹಿತಿಯಂತೆ ಕೃಷ್ಣಗಿರಿ ನಗರದಲ್ಲಿ ದಾಳಿ ನಡೆಸಿ 2 ಸಾವಿರ ರೂಪಾಯಿ ಮುಖಬೆಲೆಯ 4.66 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ತಮಿಳುನಾಡು ಹಾಗೂ ಆಂಧ್ರಮೂಲದ 11 ಮಂದಿಯನ್ನು ಬಂಧಿಸಲಾಗಿದೆ.
50 ಲಕ್ಷ ರೂಪಾಯಿಯ ಅಸಲಿ ನೋಟು ಕೊಟ್ಟರೆ 2 ಕೋಟಿ ರೂ.ನಕಲಿ ನೋಟು ನೀಡುವ ವ್ಯವಹಾರ ನಡೆಸುತ್ತಿದ್ದ ಖದೀಮರು ಇದಕ್ಕಾಗಿ ಕಲರ್ ಜೆರಾಕ್ಸ್ ಯಂತ್ರ ಬೇರೆ ಇಟ್ಟುಕೊಂಡಿದ್ದರು. ಅಸಲಿ ನೋಟಿನಂತೆ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಖದೀಮರು ಕೆಲ ವರ್ಷಗಳಿಂದ ಈ ದಂಧೆಯಲ್ಲಿದ್ದಾರೆ. ಅಲ್ಲಿಗೆ ಮಾರುಕಟ್ಟೆಯಲ್ಲಿ ದೊಡ್ಡ ಮೌಲ್ಯದ ನಕಲಿ ನೋಟುಗಳು ಸೇರಿರುವು ಪಕ್ಕಾ.
Discussion about this post