ಪಿರಿಯಾಪಟ್ಟಣ : ತಾಯಿಯ ಸಾವಿನ ನೋವು ತಡೆಯಲಾಗದ ಪುತ್ರನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣದ ಅರಸನಕೆರೆ ಮುಖ್ಯ ಸೇತುವೆ ಬಳಿ ನಡೆದಿದೆ.
ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ BSNL ನೌಕರ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡಾತ. ಅರ್ಜುನ್ ಶವ ಗುರುವಾರ ಸಂಜೆ ಪಟ್ಟಣದ ಅರಸನ ಕೆರೆಯ ಸೇತುವೆ ಬಳಿ ಸಿಕ್ಕಿದೆ.
ಸೆ.15ರಂದು ಅರ್ಜುನ್ ತಾಯಿ ಸುಜಾತ ಹೃದಯಾಘಾತದಿಂದ ಮೃತಪಟ್ಟಿದ್ದರು. ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಬಂದಿದ್ದ ಅರ್ಜುನ್ ಮನನೊಂದಿದ್ದ, ಅಷ್ಟೇ ಅಲ್ಲದೆ ತಾಯಿಯ ಜೊತೆ ನಾನೂ ಇಲ್ಲ ಅನ್ನುವಂತೆ ಸ್ಟೇಟಸ್ ಬೇರೆ ಹಾಕಿಕೊಂಡಿದ್ದ.
ಈ ನಡುವೆ ತಾಯಿಯ ಸಾವಿನ ನೋವು ತಡೆಯದ ಅರ್ಜುನ್ ನಾಪತ್ತೆಯಾಗಿದ್ದ ಈ ಬಗ್ಗೆ ಸಪ್ಟಂಬರ್ 16ರಂದು ತಂದೆ ಬಿ.ಎಲ್.ಪುಟ್ಟಸ್ವಾಮಿ ಹಾಗೂ ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದರು. ಈ ವೇಳೆ ಅರ್ಜುನ್ ಮೊಬೈಲ್ ಕೆರೆಯ ಬಳಿ ಪತ್ತೆಯಾಗಿದೆ.
ಇದೇ ಸುಳಿವಿನ ಆಧಾರದಲ್ಲಿ ಹುಡುಕಾಟ ಮುಂದುವರಿಸಿದಾಗ ಅರಸನಕೆರೆ ಮುಖ್ಯ ಸೇತುವೆಯ ಬಳಿ ಅರ್ಜುನ್ ಶವ ತೇಲುತ್ತಿರುವುದು ಪತ್ತೆಯಾಗಿದೆ.ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post