ಉಡುಪಿ : ಈ ಕೊರೋನಾ ಮಹಾಮಾರಿ ಕಾರಣದಿಂದ ಮಕ್ಕಳು ಮೊಬೈಲ್ ಗೆ ಅಂಟಿಕೊಳ್ಳುವಂತಾಗಿದೆ. ಒಂದು ಕಾಲದಲ್ಲಿ ಮೊಬೈಲ್ ಅನ್ನುತ್ತಿದ್ದ ಪೋಷಕರೇ ಮೊಬೈಲ್ ಮುಂದೆ ಕುಳಿತುಕೋ ಅನ್ನುವಂತಾಗಿದೆ.
ಈ ನಡುವೆ ಪಾಠಕ್ಕಾಗಿ ಮೊಬೈಲ್ ಮುಂದೆ ಕೂತ ಮಕ್ಕಳು, ಸೋಷಿಯಲ್ ಮೀಡಿಯಾ, ಗೇಮ್ ಎಂದು ಕಾಲ ಕಳೆಯುತ್ತಿದ್ದಾರೆ. ಅನೇಕ ಮಕ್ಕಳು ಈ ಗೀಳಿಗೆ ಬಿದ್ದಾಗಿದೆ.
ಹೀಗೆ ಮೊಬೈಲ್ ಗೇಮ್ ಅತಿಯಾಗಿ ಆಡದಂತೆ ತಾಯಿಯೊಬ್ಬಳು ಹೇಳಿದ ಬುದ್ದಿಮಾತಿಗೆ ನೊಂದ 16ರ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಕೋಟೆ ಬಳಿ ನಡೆದಿದೆ. ಮೇ.15ರ ರಾತ್ರಿ ಈ ಕೃತ್ಯ ನಡೆದಿದ್ದು ಮೃತ ಬಾಲಕಿಯನ್ನು ಸುಹೇಬತ್ ಅಸ್ಲಮೀಯಾ ಎಂದು ಗುರುತಿಸಲಾಗಿದೆ..
ರಾತ್ರಿ 8.00 ಗಂಟೆ ಹೊತ್ತಿಗೆ ಮಗಳು ಮೊಬೈಲ್ ನಲ್ಲಿ ಆಟವಾಡುತ್ತಿರುವುದನ್ನು ಗಮನಿಸಿದ ತಾಯಿ ಜುಬೇದಾ ಮೊಬೈಲ್ ನಲ್ಲಿ ಆಟ ಆಡದಂತೆ ಬುದ್ದಿ ಹೇಳಿ, ಮೊಬೈಲ್ ತೆಗೆದುಕೊಂಡು ನಮಾಜ್ ಮಾಡಲು ಹೋಗಿದ್ದಾರೆ.
ಆದರೆ ನಮಾಜ್ ಮುಗಿಸಿ ಹೊರಬಂದು ನೋಡುವಾಗ ಮಗಳು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಕರೆದಿದ್ದಾರೆ, ಕೂಗಿದ್ದಾರೆ, ಸದ್ದಿಲ್ಲದೆ ಹೋದಾಗ ಹುಡುಕಾಡಿದ್ದಾರೆ. ಇದೇ ವೇಳೆ ಮನೆ ಸಮೀಪದ ಸರ್ಕಾರಿ ಬಾವಿಯ ಬಳಿ ಜನ ಸೇರಿರುವುದನ್ನು ನೋಡಿ ಹತ್ತಿರ ಹೋದರೆ ಮಗಳು ಬಾವಿಯ ನೀರಿನಲ್ಲಿ ಮುಳುಗುತ್ತಿದ್ದಳು. ಈ ವೇಳೆ ಬಾವಿಗೆ ಇಳಿಯಲು ಗೊತ್ತಿದ್ದವರು ಯಾರೂ ಇರಲಿಲ್ಲ. ಹೀಗಾಗಿ ಅಗ್ನಿ ಶಾಮಕದಳದವರು ಬರೋ ತನಕ ಕಾಯಲೇಬೇಕಾಗಿತ್ತು. ಆದರೆ ಅವರು ಬರುವಷ್ಟು ಹೊತ್ತಿಗೆ ಬಾಲಕಿಯ ಉಸಿರು ನಿಂತು ಹೋಗಿತ್ತು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Discussion about this post