ಮಗನಿಗೆ ಮೆಡಿಕಲ್ ಸೀಟು ಪಡೆಯಲು ಅಡ್ಡ ದಾರಿ ಹಾಡಿದ ಕರ್ಮಕ್ಕೆ ವೈದ್ಯರು ಹಣ ಕಳೆದುಕೊಂಡಿದ್ದಾರೆ
ಬೆಂಗಳೂರು : ಮಗನಿಗೆ ವೈದ್ಯಕೀಯ ಸೀಟು ಪಡೆಯಲು ಹೊರಟ ವೈದ್ಯರೊಬ್ಬರು ಹನಿ ಟ್ರ್ಯಾಪ್ ಜಾಲದ ಬಲೆಗೆ ಸಿಲುಕಿ ಹಂತ ಹಂತವಾಗಿ ಒಟ್ಟು 1.16 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದೀಗ ವೈದ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ ಕಲಬುರಗಿಯ ಹನಿಟ್ರ್ಯಾಪ್ ಬಳಗವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆಳಂದ ತಾಲೂಕಿನಲ್ಲಿ ವೈದ್ಯರಾಗಿರುವ ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಮನೆ ಪಾಠ ಹೇಳಿಕೊಡುತ್ತಿದ್ದ ನಾಗರಾಜು ಅನ್ನುವ ಶಿಕ್ಷಕನ ಬಳಿ ಪಾಠಕ್ಕೆ ಕಳುಹಿಸುತ್ತಿದ್ದರು. ಈ ನಾಗರಾಜ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ, ಅಲ್ಲಿ ಕೆಲಸ ಬಿಟ್ಟು ಮನೆ ಪಾಠ ಶುರುವಿಟ್ಟುಕೊಂಡಿದ್ದ. ಮಗನ ಕಾರಣದಿಂದ ಶಿಕ್ಷಕ ನಾಗರಾಜು ಮತ್ತು ವೈದ್ಯರು ಆತ್ಮೀಯರಾಗಿದ್ದರು. 2021ರಲ್ಲಿ ಮಗನ ಪಿಯುಸಿ ಶಿಕ್ಷಣ ಮುಗಿಯುತ್ತಿದ್ದಂತೆ ಮೆಡಿಕಲ್ ಓದಿಸಲು ವೈದ್ಯರು ಮುಂದಾದರು. ಈ ವಿಚಾರ ತಿಳಿದ ನಾಗರಾಜ, ಎಂ,ಎಸ್ ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಕಾಲೇಜಿಗೆ 1.74 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡಿದ್ದ.
ಇದಾದ ಬಳಿಕ ಇನ್ನುಳಿದ 66 ಲಕ್ಷ ರೂಪಾಯಿಯನ್ನು ನಾನೇ ಕಟ್ಟಿ ಬರುವುದಾಗಿ ಹೇಳಿ ವೈದ್ಯರಿಂದ ನಾಗರಾಜು ಹಣ ಪಡೆದುಕೊಂಡಿದ್ದ. ಆದರೆ ಮಗನಿಗೆ ಸೀಟು ಸಿಗಲಿಲ್ಲ. ಕೊನೆಗೆ ಕೊಟ್ಟ ಕಾಸು ವಾಪಾಸು ಕೊಡುವಂತೆ ವೈದ್ಯರು ಶಿಕ್ಷಕನ ಬೆನ್ನು ಹತ್ತಿದ್ದರು. ಆದರೆ ಸಬೂಬು ಹೇಳಿ ತಪ್ಪಿಸಿಕೊಳ್ಳಲಾರಂಭಿಸಿದ.
ಕೊನೆಗೆ ಜನವರಿ 2022ರಲ್ಲಿ ಹಣ ಕೊಡುವುದಾಗಿ ಹೇಳಿ ಬೆಂಗಳೂರಿಗೆ ಬರುವಂತೆ ವೈದ್ಯರಿಗೆ ನಾಗರಾಜು ಸೂಚಿಸಿದ್ದಾನೆ. ಅಷ್ಟು ಹೊತ್ತಿಗೆ ವೈದ್ಯರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ಶಿಕ್ಷಕ ನಾಗರಾಜು ಸಂಚು ರೂಪಿಸಿದ್ದ. ವೈದ್ಯರು ರೈಲಿನಲ್ಲಿ ಕಲಬುರಗಿಯಿಂದ ಪ್ರಯಾಣ ಪ್ರಾರಂಭಿಸಿದ್ದಾರೆ. ಸೊಲ್ಲಾಪುರದಲ್ಲಿ ಮುಂಬೈಯಿಂದ ಕರೆ ತಂದಿದ್ದ ಇಬ್ಬರು ವೇಶ್ಯೆಯರು ಹತ್ತಿದ್ದಾರೆ. ಅದೇನೂ ಮೋಡಿ ಮಾಡಿದ್ರೋ ಗೊತ್ತಿಲ್ಲ. ಮುಂಬೈಯಿಂದ ಬಂದ ಹುಡುಗಿಯರು ವೈದ್ಯನನ್ನು ಬುಟ್ಟಿಗೆ ಬೀಳಿಸಿದ್ದಾರೆ.
ಇಬ್ಬರು ಹುಡುಗಿಯರೊಂದಿಗೆ ಬೆಂಗಳೂರಿಗೆ ಬಂದಿಳಿದ ವೈದ್ಯರು, ಮೆಜೆಸ್ಟಿಕ್ ಸಮೀಪದ ಯುಟಿ ಲಾಡ್ಜ್ ಗೆ ತೆರಳಿದ್ದಾರೆ. ಇದೇ ಕೊಠಡಿಯನ್ನು ವೈದ್ಯರಿಗಾಗಿ ನಾಗರಾಜು ಕಾಯ್ದಿರಿಸಿದ್ದ. ಹುಡುಗಿಯರ ಜೊತೆಗೆ ವೈದ್ಯರು ಕೊಠಡಿ ಸೇರುತ್ತಿದ್ದಂತೆ, ಪಕ್ಕದ ರೂಮ್ ನಲ್ಲಿ ತಂಗಿದ್ದ ನಾಗರಾಜ್ ತನ್ನ ಸಹಚರರಿಗೆ ನಕಲಿ ವಾಕಿಟಾಕಿ ಕೊಟ್ಟು ಸಿಸಿಬಿ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿಸಿದ್ದಾನೆ.
ನೀವು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ಬೆದರಿಸಿದ ನಕಲಿ ಪೊಲೀಸರು, ವೈದ್ಯರು ಹಾಗೂ ಹುಡುಗಿಯರ ಫೋಟೋಗಳನ್ನು ಜೊತೆಯಾಗಿ ತೆಗೆದಿದ್ದಾರೆ. ಇದಾದ ಬಳಿಕ 35 ಸಾವಿರ ರೂ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಇದೇ ವೇಳೆ ನೆರವು ನೀಡುವ ನೆಪದಲ್ಲಿ ಬಂದ ಮತ್ತೊಬ್ಬ ಪೊಲೀಸರ ಜೊತೆಗೆ ಮಾತನಾಡಿ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತೇನೆ. 70 ಲಕ್ಷ ಕೊಡಿ ಅಂದಿದ್ದಾನೆ.
ಮರ್ಯಾದೆಗೆ ಅಂಜಿದ ವೈದ್ಯರು, ನಕಲಿ ಪೊಲೀಸರೊಂದಿಗೆ ಕಲಬುರಗಿಗೆ ತೆರಳಿ, ಬ್ಯಾಂಕ್ ಆಸ್ತಿ ಪತ್ರ ಅಡವಿಟ್ಟು 50 ಲಕ್ಷ ಕೊಟ್ಟಿದ್ದಾರೆ. ಇದಾದ ಬಳಿಕ ಪರಿಚಿತರ ಮೂಲಕ ಅಸಲಿ ಪೊಲೀಸರನ್ನು ವೈದ್ಯರು ಭೇಟಿಯಾಗಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಸಿಸಿಬಿ ಪೊಲೀಸರು ಇದೀಗ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್, ಮತ್ತು ಹಮೀದ್ ಅನ್ನುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 24 ರೂಪಾಯಿ ನಗದು ಮತ್ತು 25 ಗ್ರಾಮ್ ಚಿನ್ನ ವಶಪಡಿಸಿಕೊಳ್ಳಲಾಗಿದೆ.
Discussion about this post