ಬಾಗಲಕೋಟೆ : ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ನಡೆದಿದೆ.
ಮೃತ ಬೈಕ್ ಸವಾರನನ್ನು ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ನಿವಾಸಿ ಕೂಡಲೆಪ್ಪ ಬೋಳಿ(58) ಎಂದು ಗುರುತಿಸಲಾಗಿದೆ.
ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನರು 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ಹಿಂತಿರುಗುತ್ತಿದ್ದರು. ಈ ವೇಳೆ ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಚಿದಾನಂದ ಅವರ ಕಾರು ಹೊಲದಿಂದ ವಾಪಸಾಗುತ್ತಿದ್ದ ಕೂಡಲೆಪ್ಪ ಅವರನ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಸವಾರನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಆಸ್ಪತ್ರೆಗೆ ಸೇರಿದ ಕೆಲವೇ ಕ್ಷಣಗಳಲ್ಲಿ ಕೂಡಲೆಪ್ಪ ಮೃತಪಟ್ಟಿದ್ದಾರೆ.
ಈ ನಡುವೆ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ಸವಾರನನ್ನು ಆಸ್ಪತ್ರೆಗೆ ಸೇರಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ ಚಿದಾನಂದ ಪರಾರಿಯಾಗಲು ಯತ್ನಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಆದ್ರೆ ಸ್ಥಳೀಯರು ಚಿದಾನಂದನನ್ನು ತಪ್ಪಿಸಿಕೊಳ್ಳಲು ಬಿಡದೆ ಕೆಲಹೊತ್ತು ಹಿಡಿದು ಕೂರಿಸಿದ್ದಾರೆ. ಬಳಿಕ ಹುನಗುಂದ ಪೊಲೀಸರು ಚಿದಾನಂದನನ್ನು ಬಿಡಿಸಿ ಕಳುಹಿಸಿದ್ದಾರೆ ಎಂದು ಗೊತ್ತಾಗಿದ್ದು. ಈ ಕುರಿತಂತೆ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೀಗ ಚಿದಾನಂದ ಬದಲು ಚಾಲಕ ಹನುಮಂತ ಸಿಂಗ್ ಹೆಸರಲ್ಲಿ ದೂರು ದಾಖಲಾಗಿದ್ದು, ಡಿಸಿಎಂ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
Discussion about this post