ಜೈಪುರ : ಉತ್ತಮ ಭವಿಷ್ಯಕ್ಕಾಗಿ ಉತ್ತಮ ನಾಗರಿಕರನ್ನು ಕೊಡುವಲ್ಲಿ ಶಿಕ್ಷಕರದ್ದು ಪ್ರಮುಖ ಪಾತ್ರ, ಹೀಗಾಗಿಯೇ ಸಮಾಜದಲ್ಲಿ ಶಿಕ್ಷಕರಿಗೊಂದು ಗೌರವವಿದೆ. ಆದರೆ ಕೆಲ ಶಿಕ್ಷಕರು ಮಾಡುವ ಹೀನ ಕೃತ್ಯದಿಂದ ಗುರುಗಳು ಎಂದು ಕರೆಸಿಕೊಂಡವರು ತಲೆ ತಗ್ಗಿಸುವ ಪರಿಸ್ಥಿತಿ ಬಂದು ತಲುಪಿದೆ.
ಅದರಲ್ಲೂ ವಿದ್ಯಾದೇಗುಲವೆಂದೇ ಕರೆಸಿಕೊಂಡ ಶಾಲೆಯಲ್ಲಿ ಶಿಕ್ಷಕರೇ ಕೀಚಕರಾಗುತ್ತಿರುವುದು ದುರಂತವೇ ಸರಿ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆಯ ಪ್ರಾಂಶುಪಾಲ ಹಾಗೂ 9 ಶಿಕ್ಷಕರು ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದಾರೆ.
ಶಾಲೆಗೆ ಏಕೆ ಹೋಗುತ್ತಿಲ್ಲ ಎಂದು ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಂದೆ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ಮೇಲೆ ಶಾಲೆಯ ಪ್ರಾಂಶುಪಾಲರು ಹಾಗೂ ಇತರೆ ಮೂವರು ಶಿಕ್ಷಕರು ಕಳೆದ ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ನಡೆಸುತ್ತಿರುವುದಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಈ ಕೃತ್ಯವನ್ನು ಇಬ್ಬರು ಮಹಿಳಾ ಶಿಕ್ಷಕರು ವಿಡಿಯೋಗಳಲ್ಲಿ ಸೆರೆ ಹಿಡಿದಿದ್ದಾರೆ ಎಂದೂ ಆಕೆ ಆರೋಪಿಸಿದ್ದಾಳೆ.
ಈ ನಡುವೆ ತನ್ನ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಬಾಲಕಿಯರಲ್ಲಿ ಒಬ್ಬಳು, ಮಹಿಳಾ ಶಿಕ್ಷಕರಿಗೆ ವಿಷಯ ತಿಳಿಸಿದ್ದಳು. ಈಗ ಆ ಶಿಕ್ಷಕಿ ಶಾಲಾ ಶುಲ್ಕ ಮತ್ತು ಪುಸ್ತಕ ನೀಡುವ ಆಮಿಷ ಒಡ್ಡಿದ್ದು ಮಾತ್ರವಲ್ಲದೆ ದೂರು ನೀಡದಂತೆ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ತನಿಖೆಯ ವೇಳೆ 6,4, ಮತ್ತು ಮೂರನೇ ತರಗತಿಯ ಇನ್ನೂ ಮೂವರು ಬಾಲಕಿಯರು ಶಿಕ್ಷಕರ ಕೀಚಕ ಬುದ್ದಿಯನ್ನು ಹೇಳಿದ್ದಾರೆ.
Discussion about this post