ಬೆಂಗಳೂರು : 32 ವರ್ಷದ ಮಹಿಳೆಯೊಂದಿಗೆ ಪ್ರೀತಿ ಪ್ರೇಮ ಮದುವೆ ಎಂದು ನಾಟಕವಾಡಿ ಕೊನೆಗೆ ಮೋಸ ಮಾಡಿದ ಆರೋಪ ಎದುರಿಸುತ್ತಿರುವ 29 ವರ್ಷದ ಪೊಲೀಸ್ ಸಬ್ ಇನ್ಸ್ ಪೆಕ್ಟ್ ರನ್ನು ತಕ್ಷಣ ಬಂಧಿಸಿ ಸಿಐಡಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಪ್ರಕರಣ ಸಂಬಂಧ ಎಸ್ಐ ವಿಶ್ವನಾಥ್ ಬಿರಾದಾರ್ ಗೆ ದಕ್ಷಿಣ ಕನ್ನಡ ಜಿಲ್ಲೆಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಕೂಡಾ ಹೈಕೋರ್ಟ್ ರದ್ದುಗೊಳಿಸಿದೆ. 2020 ಡಿ 19 ರಂದು ವಿಚಾರಣ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣವಿದ್ದರೂ ಅಧಿಕಾರಿಯಾಗಿರುವ ಆರೋಪಿ ವಿರುದ್ಧ ಎಫ್ ಐ ಆರ್ ದಾಖಲಿಸಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಧರ್ಮಸ್ಥಳ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿಯ ರಕ್ಷಣೆಗೆ ಧರ್ಮಸ್ಥಳ ಠಾಣಾ ಪೊಲೀಸರು ಮುಂದಾಗಿರುವುದು ಸ್ಪಷ್ಟವಾಗಿದೆ. ಮುಂದಿನ ನಾಲ್ಕು ತಿಂಗಳ ಒಳಗಾಗಿ ಸಿಐಡಿ ತನಿಖೆ ಮುಕ್ತಾಯವಾಗಬೇಕಾಗಿದ್ದು, ಅಂತಿಮ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ಆರೋಪಿಗೆ ಸಹಕರಿಸಿರುವ ಧರ್ಮಸ್ಥಳ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸಂದೇಶ್, ಪಿಎಸ್ಐ ಪವನ್ ಮತ್ತು ಇತರ ಸಿಬ್ಬಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನಲೆ
30 ವರ್ಷ ಮಹಿಳೆಯೊಬ್ಬರು ತನ್ನ ಲ್ಯಾಪ್ ಟಾಪ್ ಕಳವು ಪ್ರಕರಣ ಸಂಬಂಧ ದೂರು ನೀಡಲು 2020ರ ಆಗಸ್ಟ್ ತಿಂಗಳಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಪರಿಚಯವಾದ ವಿಶ್ವನಾಥ್ ಬಿರದಾರ್ ಹಾಗೂ ಮಹಿಳೆಯ ಫೋನ್ ನಂಬರ್ ಗಳು ಪರಸ್ಪರ ಕೈ ಬದಲಾಯಿಸಿತ್ತು. ಇದಾದ ಬಳಿಕ ಯುವತಿಗೆ ಪದೇ ಪದೇ ಪದೇ ಕರೆ ಮಾಡುತ್ತಿದ್ದ ವಿಶ್ವನಾಥ್ ನಾನು ಪ್ರೀತಿಯಲ್ಲಿ ಬಿದ್ದಿದ್ದು, ಮದುವೆಯಾಗುವುದಾಗಿ ಹೇಳಿದ್ದರಂತೆ. ಜೊತೆಗೆ 12 ಲಕ್ಷ ಹಣಕ್ಕೂ ಬೇಡಿಕೆ ಇಟ್ಟಿದ್ದರಂತೆ. ಇದಕ್ಕೆ ಮಹಿಳೆ ಒಪ್ಪಿರಲಿಲ್ಲ.
ಆ ನಂತ್ರ ಲ್ಯಾಪ್ ಟಾಪ್ ಕೇಸ್ ಸಂಬಂಧ ಮಾತನಾಡಲಿದೆ ಎಂದು ನನ್ನನ್ನು ಕರೆಸಿಕೊಂಡಿದ್ದ ವಿಶ್ವನಾಥ್ ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆಯೂ ಪ್ರೀತಿಸುವಂತೆ ನನ್ನ ಒತ್ತಾಯಿಸುತ್ತಿದ್ದರು. ಅವರ ಮಾತಿಗೆ ಮರುಳಾದ ನಾನು ಪ್ರೀತಿಯ ಆಫರ್ ಅನ್ನು ಒಪ್ಪಿಕೊಂಡೆ. ಅಕ್ಟೋಬರ್ 8 ರಂದು ಅವರ ಮದುವೆ ಪ್ರಸ್ತಾಪಕ್ಕೂ ಸಮ್ಮತಿಸಿದೆ.
ಇದಾದ ನಂತರ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ನವೆಂಬರ್ 10 ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಬಂದಿದ್ದ ವಿಶ್ವನಾಥ್ ಲಾಡ್ಜ್ ಒಂದರಲ್ಲಿ ರೂಮ್ ಪಡೆದು ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಇದಾದ ಬಳಿಕ ನನಗೆ ಈಗಾಗಲೇ ವಿವಾಹವಾಗಿದ್ದು, ಮತ್ತೊಂದು ಮದುವೆಯಾಗಲು ಇಚ್ಛೆಯಿಲ್ಲ ಎಂದು ನವೆಂಬರ್ 11 ರಂದು ತಿಳಿಸಿದ್ದಾರೆ ಎಂದು ಯುವತಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಾದ ಬಳಿಕ ವಿಶ್ವನಾಥ್ ಬಿರದಾರ್ ಮಹಿಳೆ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದರು. ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಈ ಪ್ರಕರಣದಲ್ಲಿ, ಮಹಿಳೆ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ.
ಲ್ಯಾಪ್ ಟಾಪ್ ಕಳ್ಳತನದ ಕೇಸ್ ದಾಖಲಾದ ನಂತ್ರ ನನಗೆ ಅನಗತ್ಯವಾಗಿ ಮಹಿಳೆ ಕರೆ ಮಾಡುತ್ತಿದ್ದಳು. ನವೆಂಬರ್ 8 ರಂದು ಬಸವನಗುಡಿಯಲ್ಲಿ ಭೇಟಿಯಾಗುವಂತೆ ಮನವಿ ಮಾಡಿದ್ದರು. ಹೋಗಿ ಭೇಟಿಯಾದರೆ ಮದುವೆಯಾಗುವಂತೆ ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದೇ ಹೋದಾಗ, ಸೂಸೈಡ್ ನೋಟ್ ನಲ್ಲಿ ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ.
ಇದಾದ ಬಳಿಕ ಮಹಿಳೆಯೇ ನನ್ನನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ನನ್ನ ಕಡೆಯಿಂದ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ರೆ ರೇಪ್ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದಾರೆ.
ಈ ನಡುವೆ ಇದೇ ಮಹಿಳೆ ಇದೇ ರೀತಿ ಮೂರು ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಈ ಪ್ರಕರಣ ಕುತೂಹಲಕ್ಕೆ ಕಾರಣವಾಗಿತ್ತು.
Discussion about this post