ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಬಲೂಚಿಸ್ತಾನದ ಖಜ್ದಾರ್ ಜಿಲ್ಲೆಯ ಖೋರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವಾಧ್ ನಿಂದ ದಾಬು ಎಂಬಲ್ಲಿಗೆ ಬಸ್ ತೆರಳುತ್ತಿತ್ತು ಎನ್ನಲಾಗಿದೆ.
ಜಿಯೋ ನ್ಯೂಸ್ ಪ್ರಕಾರ 15 ಜನ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನುಳಿದವರು ಆಸ್ಪತ್ರೆಗೆ ತೆರಳುವ ದಾರಿ ನಡುವೆ ಹಾಗೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ.
ಸೂಫಿ ಸಂತನ ಕ್ಷೇತ್ರವೊಂದರ ದರ್ಶನ ಮುಗಿಸಿ ಬರುತ್ತಿದ್ದ ಬಸ್ ನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಬಸ್ ಮೇಲ್ಭಾಗದಲ್ಲೂ ಜನ ಹತ್ತಿ ಕುಳಿತಿದ್ದರು. ಹೀಗಾಗಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿ ಹೊಡೆದು ಬಿದ್ದಿದೆ.
ಇನ್ನು ಬದುಕುಳಿದ ಪ್ರಯಾಣಿಕರು ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಸಿಕ್ಕಾಪಟ್ಟೆ ವೇಗವಾಗಿ ಅಜಾಗರೂಕತೆಯಲ್ಲಿ ಬಸ್ ಓಡಿಸುತ್ತಿದ್ದ. ಹಲವು ಸಲ ಎಚ್ಚರಿಸಿದರೂ ಮ್ಯೂಸಿಕ್ ಜೋರಾಗಿ ಇಟ್ಟುಕೊಂಡು ಬಸ್ ಚಲಾಯಿಸಿದ್ದಾನೆ ಎಂದು ದೂರಿದ್ದಾರೆ.
ಗಾಯಗೊಂಡ 50ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ.
Discussion about this post