ಬೆಂಗಳೂರು : JP ನಗರದ 7ನೇ ಹಂತದಲ್ಲಿ ನಡೆದ ಖಾಸಗಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರ ತಾಯಿ ಮತ್ತು ಸ್ನೇಹಿತನನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೊಲೆಗೆ 12 ರೂಪಾಯಿಯ ಸಿಗರೇಟು ವಿಚಾರವೊಂದು ಕಾರಣವಾಗಿತ್ತು ಅನ್ನುವ ವಿಚಿತ್ರ ಸಂಗತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಲೆಯಾದ ದೇವಬ್ರತಾ ಬಹೇರಾ ಏಪ್ರಿಲ್ 7 ರಂದು ಮನೆ ಪಕ್ಕದ ಬಾರ್ ಗೆ ಕುಡಿಯಲು ಹೋಗಿದ್ದಾರೆ. ಈ ವೇಳೆ ಕಂಠ ಪೂರ್ತಿ ಕುಡಿದು ಹೊರ ಬಂದಿದ್ದ ದೇವಬ್ರತಾ, ಅಲ್ಲೇ ಪಕ್ಕದ ಅಂಗಡಿಯಲ್ಲಿ ಸಿಗರೇಟು ಖರೀದಿಸಿದ್ದಾರೆ. ಈಗ ಗೂಗಲ್ ಪೇ ಮೂಲಕ ಸಿಗರೇಟ್ ಮೊತ್ತವನ್ನು ಪಾವತಿಸಲಾಗದೆ ಒದ್ದಾಡಿದ್ದಾರೆ.
ಈ ವೇಳೆ ದೇವಬ್ರತಾ ಕೈಯಲ್ಲಿ ದುಬಾರಿ ಮೊಬೈಲ್ ಕಂಡ ಆರೋಪಿ ಮಂಜುನಾಥ ಅಂಗಡಿಯವನಿಗೆ ತಾನೇ ಕಾಸು ಕೊಟ್ಟಿದ್ದಾನೆ. ದೇವಬ್ರತಾ ಮನೆ ಕಡೆ ತೆರಳುತ್ತಿದ್ದಂತೆ ಅವರನ್ನು ಹಿಂಬಾಲಿಸಿದ ಆರೋಪಿ ಮೊಬೈಲ್ ಕದಿಯಲು ಯತ್ನಿಸಿದ್ದಾನೆ. ಅದು ಸಫಲವಾಗಿರಲಿಲ್ಲ. ಈ ವೇಳೆ ದೇವಬ್ರತಾ ಸಿರಿವಂತರ ಕಾಲೋನಿಗೆ ಎಂಟ್ರಿ ಕೊಡುತ್ತಿದ್ದಂತೆ, ಆರೋಪಿಗೆ ಆಸೆ ಚಿಗುರಿದೆ. ಹೀಗಾಗಿ ಮತ್ತೆ ದೇವಬ್ರತಾ ಜೊತೆ ಮತ್ತೆ ಸಲುಗೆ ಬೆಳೆಸಿ ಮನೆಗೆ ಸೇಫ್ ಆಗಿ ತಲುಪಿಸುವ ಭರವಸೆ ನೀಡಿದ್ದಾನೆ.
ದೇವಬ್ರತಾ ಬಹೇರಾ ಮನೆಯ ಬೆಲ್ ಒತ್ತಿದ್ದ ವೇಳೆ ಮಮತಾ ಬಸು ಬಾಗಿಲು ತೆರೆದಿದ್ದಾರೆ. ಈ ವೇಳೆ ಅವರು ಧರಿಸಿದ್ದ ಚಿನ್ನದ ಒಡವೆಗಳು ಮಂಜುನಾಥನ ಕಣ್ಣು ಕುಕ್ಕಿದೆ. ಜೊತೆಗೆ ಮನೆಯಲ್ಲಿ ಇರುವುದೇ ಇಬ್ಬರೇ, ಒಬ್ಬ ಕುಡಿದು ಚಿತ್ತಾಗಿದ್ದಾನೆ, ಮತ್ತೊಬ್ಬರು ವಯಸ್ಸಾದ ಅಜ್ಜಿ ಅನ್ನುವುದು ಖದೀಮನಿಗೆ ಗೊತ್ತಾಗಿದೆ.
ಹೀಗಾಗಿ ದೇವಬ್ರತಾ ಬಹೇರಾನನ್ನು ಮನೆಗೆ ತಲುಪಿಸಿ ನೇರ ಕೋಣನಕುಂಟೆಗೆ ಬಂದವನೇ ರಸ್ತೆ ಬದಿ ನಿಲ್ಲಿಸಿದ್ದ ಪಲ್ಸರ್ ಬೈಕ್ ಕದ್ದು ರಾತ್ರಿ 12ರ ಸುಮಾರಿಗೆ ದೇವಬ್ರತಾ ಬಹೇರಾ ಮನೆಗೆ ಬಂದಿದ್ದಾನೆ. ಕಾಲಿಂಗ್ ಬೆಲ್ ಒತ್ತಿದ ವೇಳೆ ಬಹೇರಾ ಬಾಗಿಲು ತೆರೆದಿದ್ದಾರೆ ಈ ವೇಳೆ ಆತನ ಕುತ್ತಿಗೆಗೆ ಇರಿದ ಆರೋಪಿ ಮೊದಲ ಮಹಡಿಗೆ ತೆರಳಿ ಮಮತಾ ಅವರ ಕತ್ತು ಸೀಳಿದ್ದಾನೆ.
ನಂತರ ಚಿನ್ನದ ಬಳೆ, ಸರ, ಬ್ರಾಸ್ ಲೆಟ್, 4 ಮೊಬೈಲ್, 2 ಲ್ಯಾಪ್ ಟಾಪ್, ಸಿಸಿಟಿವಿಯ ಹಾರ್ಡ್ ಡಿಸ್ಕ್ ದೋಚಿ ಪರಾರಿಯಾಗಿದ್ದ.
ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮೊದಲು ಘಟನಾ ಸ್ಥಳದ ಸುತ್ತಮುತ್ತಲಿನ 200 ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾರ್ ನಿಂದ ದೇವಬ್ರತಾ ಬಹೇರಾ ಹೊರ ಬರುವ ದೃಶ್ಯಗಳು ಸಿಕ್ಕಿದೆ. ಹೀಗಾಗಿ ಅದೇ ದೃಶ್ಯದ ಜಾಡು ಹಿಡಿದ ಪೊಲೀಸರಿಗೆ ಸಿಗರೇಟ್ ಅಂಗಡಿಯ ದೃಶ್ಯಗಳು ಸಿಕ್ಕಿದೆ ಆ ದೃಶ್ಯದಲ್ಲಿ ಸೆರೆಯಾಗಿದ್ದ ಮಂಜುನಾಥ, ಕೋಣನಕುಂಟೆಯಯಲ್ಲಿ ಪಲ್ಸರ್ ಕದ್ದ ದೃಶ್ಯವೂ ಸಿಕ್ಕಿತ್ತು. ಹೀಗಾಗಿ ಅನುಮಾನಗೊಂಡು ಆರೋಪಿಯ ಬಂಧನಕ್ಕೆ ಹೋದ್ರೆ ಮಂಜುನಾಥ ಡ್ರ್ಯಾಗರ್ ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಗುಂಡು ಹಾರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಜುನಾಥ ಅಲಿಯಾಸ್ ಅಂಬಾರಿ ನಟೋರಿಯಸ್ ಆಗಿದ್ದು, 2013 ರಿಂದಲೇ ಪಾತಕ ಕೃತ್ಯ ಎಸಗುತ್ತಿದ್ದಾನೆ. ಈತನ ವಿರುದ್ಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ವಿಶೇಷ ಅಂದ್ರೆ ಎಲ್ಲಾ ಕೃತ್ಯಗಳನ್ನು ಒಬ್ಬನೇ ಎಸಗುತ್ತಿದ್ದ. ಯಾವುದೇ ಸಹಚರರು ಇವನಿಗಿಲ್ಲ.
ಮನೆ ಇಲ್ಲದ ಮಂಜುನಾಥ ಮೊಬೈಲ್ ಕೂಡಾ ಬಳಸುವುದಿಲ್ಲ. ಆದರೆ ಇತನಿಗೊಬ್ಬಳು ಪ್ರಿಯತಮೆ ಇದ್ದಾಳೆ. ಹಿಂದೊಮ್ಮೆ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ವೇಳೆ ಮಧುಗಿರಿಯ ಯುವತಿ ಜೊತೆ ಸ್ನೇಹ ಬೆಳೆಸಿದ್ದನಂತೆ.
ಜೆಪಿ ನಗರದ ಜೋಡಿ ಕೊಲೆಯ ಬಳಿಕ ಕೋಣಕುಂಟೆಯ ಪ್ಲಂಬರ್ ಒಬ್ಬರನ್ನು ಬೆದರಿಸಿ ಮೊಬೈಲ್ ದೋಚಿದ್ದ. ಬಳಿಕ ಇದೇ ಮೊಬೈಲ್ ನಿಂದ ಪ್ರಿಯತಮೆಗೆ ಕರೆ ಮಾಡಿದ್ದ. ಇದೇ ಕರೆ ಕೊಲೆಗಾರನ ಜಾಡು ತೋರಿಸಿತ್ತು.
Discussion about this post