ಬೆಳಗಾವಿ : ಕಲಿಯುಗದ ಅಂತ್ಯ ಸಮೀಪಿಸಿದೆಯೋ, ನರ ರೂಪದಲ್ಲಿರುವ ರಾಕ್ಷಸರಿಗೆ ಕಾನೂನಿನ ಭಯ ಹೊರಟು ಹೋಗಿದೆಯೋ, ಕ್ರಿಮಿನಿಲ್ ಗಳಿಗೆ ಪೊಲೀಸರ ಭಯವಿಲ್ಲದಾಗಿಯೋ ಅನ್ನುವುದು ಗೊತ್ತಾಗುತ್ತಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು, ಮಹಿಳೆಯರು ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಶಾಸನ ಸಭೆಯಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಕುರಿತಂತೆ ಗಂಭೀರ ಚರ್ಚೆಗಳು ನಡೆಯುತ್ತಿದೆ. ಮತ್ತೊಂದು ಕಡೆ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದೆ. ಈ ನಡುವೆ ಬೆಳಗಾವಿ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಎರಡು ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ.
ಬೆತ್ತಲೆ ಸ್ಥಿತಿಯಲ್ಲಿ, ಮೈಮೇಲೆ ಸಿಗರೇಟ್ ನಿಂದ ಸುಟ್ಟುಗಾಯಗೊಳಿಸಿರುವುದು ವಿಷಯವನ್ನು ಮತ್ತಷ್ಟು ಗಂಭೀರವಾಗಿಸಿದೆ. ಬಾಲಕಿ ಎರಡು ದಿನಗಳ ಕಾಲ ಗದ್ದೆಯಲ್ಲೇ ನರಳಿದ್ದಾಳೆ ಅನ್ನುವ ಆತಂಕಕಾರಿ ಮಾಹಿತಿಗಳು ಇದೀಗ ಗೊತ್ತಾಗಿದ್ದು, ಮಗುವಿನ ನರಳಾಟದ ಸದ್ದು ಕೇಳಿ ಕಬ್ಬಿನ ಗದ್ದೆಯಲ್ಲಿ ಗ್ರಾಮಸ್ಥರು ಹುಡುಕಾಡಿದ ವೇಳೆ ಮಗು ಪತ್ತೆಯಾಗಿದೆ.
ಈ ಆಮಾನವೀಯ ಘಟನೆಯಿಂದ ನಾಡು ಬೆಚ್ಚಿ ಬಿದ್ದಿದ್ದು, ಪ್ರಸ್ತುತ ಬಾಲಕಿಯನ್ನು ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಾಮಾಚಾರದ ಹಿನ್ನಲೆಯಲ್ಲಿ ಹಿಂಸೆ ನೀಡಲಾಗಿದೆ ಅನ್ನುವುದು ಪ್ರಾಥಮಿಕ ಮಾಹಿತಿ, ಪೊಲೀಸರು ಈ ಸಂಬಂಧ ತನಿಖೆ ಪ್ರಾರಂಭಿಸಿದ್ದು, ಬಳಿಕ ಸತ್ಯಾಂಶ ಗೊತ್ತಾಗಲಿದೆ.
ಸ್ಥಳಕ್ಕೆ ಡಿವೈಎಸ್ಪಿ ಎಸ್. ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discussion about this post