ಬೆಂಗಳೂರು : ವಿಮಾನ ನಿಲ್ದಾಣ ರಸ್ತೆಯಲ್ಲಿ ಚಿಕ್ಕಜಾಲದಲ್ಲಿ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಅತೀ ವೇಗದಲ್ಲಿ ಬರುತ್ತಿದ್ದ ಮಹೀಂದ್ರ SUV ಕಾರು ಮೊದಲು ಚಾಲಕನ ನಿಯಂತ್ರಣ ತಪ್ಪಿದೆ. ಹೀಗಾಗಿ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೊಂದು ಬದಿಗೆ ಹಾರಿದ ಕಾರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಮೇಲೆ ಬಿದ್ದಿದೆ.
SUV ಬಿದ್ದ ರಭಸಕ್ಕೆ ಕ್ಯಾಬ್ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಕ್ಯಾಬ್ ನಲ್ಲಿದ್ದ ಪೂರ್ಣಿಮಾ ರವೀಂದ್ರ ಹಾಗೂ ಅವರ ಮಗಳು ಲಕ್ಷ್ಮೀ ರವೀಂದ್ರ ಮತ್ತು ಕ್ಯಾಬ್ ಚಾಲಕ ಮೃತಪಟ್ಟಿದ್ದಾರೆ. ಹುಚ್ಚರಂತೆ SUV ಓಡಿಸಿಕೊಂಡು ಬಂದ ಭರತ್ ಮತ್ತು ವಿಕಾಸ್ ಸಮೀಪದ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿತ್ತು. ಹೀಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತ ದೇಹ ತೆಗೆಯಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಮೃತದೇಹದೊಂದಿಗೆ ಕಾರನ್ನು ಟೋಯಿಂಗ್ ಮಾಡಲಾಯ್ತು.
Discussion about this post