ಶೃಂಗೇರಿ : ಒಂದೇ ಮನೆಯಲ್ಲಿ ಮೂವರು ಏಕ ಕಾಲಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಜ್ಜಿ,ಮಗಳು, ಮೊಮ್ಮಗಳು ನೇಣಿಗೆ ಕೊರಳೊಡ್ಡಿದ್ದಾರೆ.
ಮೃತರನ್ನು ವೀಣಾ(70), ಶಾರದಾ (49), ಶ್ರಾವ್ಯ(16) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಮೃತ ವೀಣಾ ಶೃಂಗೇರಿಯ ಹೊನ್ನವಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ವೀಣಾ ಅಂಗನವಾಡಿಗೆ ಬಾರದ ಹಿನ್ನಲೆಯಲ್ಲಿ ಅಂಗನವಾಡಿ ಸಹಾಯಕಿ ಪೂರ್ಣಿಮ ವೀಣಾ ಅವರಿಗೆ ಕರೆ ಮಾಡಿದ್ದಾರೆ. ಅವರು ಫೋನ್ ತೆಗೆದಿಲ್ಲ. ಹೀಗಾಗಿ ಪೂರ್ಣಿಮ ಸ್ಥಳೀಯರಿಗೆ ಕರೆ ಮಾಡಿ ವೀಣಾ ಅವರಿಗೆ ವಿಷಯ ಮುಟ್ಟಿಸುವಂತೆ ಕೋರಿದ್ದಾರೆ.
ಈ ವೇಳೆ ಸ್ಥಳೀಯರು ಅವರ ಮನೆ ಬಳಿ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಯಾರೂ ತೆಗೆಯಲಿಲ್ಲ. ಹೀಗಾಗಿ ಮನೆಯ ಹೆಂಚು ತೆಗೆದು ನೋಡಿದಾಗ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ
Discussion about this post