ಬೆಂಗಳೂರು: ಜೆಸಿ ನಗರ ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಮೃತಪಟ್ಟಿರುವ ಘಟನೆ ನಡೆದಿದೆ. ಡ್ರಗ್ಸ್ ಕೇಸ್ ವಿಚಾರದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆಫ್ರಿಕಾ ಪ್ರಜೆಯೊಬ್ಬ ಡ್ರಗ್ ಪೆಡ್ಲಿಂಗ್ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ದಾಳಿ ನಡೆಸಿ 5 ಗ್ರಾಂ ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡಿದೆ ಎಂದು ಆರೋಪಿ ಹೇಳಿದ ಕಾರಣಕ್ಕೆ ಚಿರಾಯು ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು.
ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಮೃತಪಟ್ಟಿದ್ದಾನೆ. ಸಾವಿಗೆ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ನಡುವೆ ಆಫ್ರಿಕನ್ ಪ್ರಜೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿರುವ ಆಫ್ರಿಕನ್ ಪ್ರಜೆಗಳು ಠಾಣಾ ಮುಂದೆ ಜಮಾಯಿಸಿದ್ದಾರೆ. ಪೊಲೀಸರ ವಿರುದ್ಧವೇ ಆಶ್ಲೀಲ ಸನ್ನೆ ತೋರಿಸಿ ಅಟ್ಟಹಾಸ ಮರೆದಿದ್ದಾರೆ.
ಮಾತ್ರವಲ್ಲದೆ ಪೊಲೀಸರ ಕುತ್ತಿಗೆಗೆ ಕೈ ಹಾಕಿರುವ ಆಫ್ರಿಕನ್ ಪ್ರಜೆಗಳು ಪೊಲೀಸರನ್ನು ಎಳೆದಾಡಿದ್ದಾರೆ. ಅಷ್ಟಕೆ ನಿಲ್ಲದ ಆಫ್ರಿಕನ್ ಪ್ರಜೆಗಳ ರೌಡಿಸಂ. ಪೊಲೀಸ್ ಠಾಣೆಯ ಮುಂದೆಯೇ ಪೊಲೀಸರಿಗೆ ಹಲ್ಲೆ ನಡೆಸಿದ್ದಾರೆ. ಇದೀಗ ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪೊಲೀಸರ ಬಗ್ಗೆ ಗಂಭೀರ ಆರೋಪ ಮಾಡಿರುವ ಆಫ್ರಿಕನ್ ಪ್ರಜೆಗಳು, ಮೃತನಿಗೆ ಪೊಲೀಸರೇ ಮಾದಕ ವಸ್ತು ಇಂಜೆಕ್ಟ್ ಮಾಡಿದ್ದಾರೆ. ಈ ಹಿಂದೆಯೂ ಪೊಲೀಸರು ನಮ್ಮ ನ್ನು ಕಾರಣವಿಲ್ಲದೆ ಬಂಧಿಸಿ ಹಿಂಸೆ ನೀಡಿದ್ದಾರೆ ಎಂದು ದೂರಿದ್ದಾರೆ
Discussion about this post