ಉಡುಪಿ : ಜಿಲ್ಲೆಯ ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ಜುಲೈ 12 ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಅದ್ಯಾವ ದಿಕ್ಕಿನಿಂದ ನೋಡಿದರೂ ಕೊಲೆಗೆ ಕಾರಣವೇ ಸಿಗುತ್ತಿರಲಿಲ್ಲ. ಹಾಗಂತ ದಕ್ಷ ಪೊಲೀಸರಿದ್ದ ಸಂದರ್ಭದಲ್ಲಿ ಅದ್ಯಾವ ಪ್ರಕರಣಗಳು ದಿಕ್ಕು ತಪ್ಪುವುದಿಲ್ಲ. ಅದೇ ರೀತಿ ವಿಶಾಲ ಗಾಣಿಗ ಕೊಲೆ ಪ್ರಕರಣ ಕೂಡಾ.
ಇದೀಗ ವಿಶಾಲ ಗಾಣಿಗ ಪತಿ, ರಾಮಕೃಷ್ಣ ಗಾಣಿಗನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿ, 4 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಜೊತೆಗೆ ಉತ್ತರ ಪ್ರದೇಶದ ಮೂಲದ ಬಾಡಿಗೆ ಹಂತಕನೊಬ್ಬನನ್ನು ಬಂಧಿಸಿದ್ದಾರೆ.
ಹಾಗಾದ್ರೆ ದುಬೈ ನಲ್ಲಿ ಕೂತು, ಉಡುಪಿಯಲ್ಲಿ ಪತ್ನಿಯನ್ನು ಹೇಗೆ ಮುಗಿಸಿದ, ಇದಕ್ಕೆ ಕಾರಣ ಏನು ಅನ್ನುವುದೇ ಎಲ್ಲರ ಪ್ರಶ್ನೆಯಾಗಿದೆ. ಕೊಲೆಗೆ ನಿಖರ ಕಾರಣ ಏನು ಅನ್ನುವುದು ಇನ್ನೂ ಗೊತ್ತಾಗಿಲ್ಲ. ಇಂದು ಉಡುಪಿ ಪೊಲೀಸರು ಈ ಬಗ್ಗೆ ಮಾಹಿತಿ ಕೊಡುವ ನಿರೀಕ್ಷೆಗಳಿದೆ.
ಯಾವಾಗ ಜುಲೈ 12 ರಂದು ಕೊಲೆ ಪ್ರಕರಣ ಬೆಳಕಿಗೆ ಬಂತೋ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೇ ತನಿಖೆಯ ಉಸ್ತುವಾರಿ ವಹಿಸಿಕೊಂಡರು. ಆರು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದರು. ಈ ವೇಳೆ ಹತ್ತು ಹಲವು ಅಂಶಗಳು ಕೂಡಾ ಬೆಳಕಿಗೆ ಬಂದಿದೆ.
ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ಮಗಳ ಜೊತೆಗೆ ದುಬೈ ನಲ್ಲಿ ವಾಸವಿದ್ದರು. ಊರಿಗೆ ಬಂದಾಗ ವಾಸ್ತವ್ಯ ಹೂಡಲೆಂದು 2019ರಲ್ಲೇ ಫ್ಲಾಟ್ ಒಂದನ್ನು ಖರೀದಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಪತ್ನಿ ಮಗಳ ಜೊತೆ ಊರಿಗೆ ಆಗಮಿಸಿದ್ದ ರಾಮಕೃಷ್ಣ ತನ್ನ ಪಿತ್ರಾರ್ಜಿತ ಆಸ್ತಿಯ ಪವರ್ ಆಫ್ ಆಟಾರ್ನಿಯನ್ನು ವಿಶಾಲ ಅವರ ತಂದೆಗೆ ಕೊಟ್ಟು ದುಬೈಗೆ ಸಂಸಾರ ಸಮೇತ ಮರಳಿದ್ದರು.
ಇದಾದ ಬಳಿಕ ಇದೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 2 ರಂದು ದುಬೈ ನಿಂದ ಮಗಳ ಜೊತೆ ಬಂದಿದ್ದ ವಿಶಾಲ ಗಾಣಿಗ ಆಸ್ತಿಯ ಕೆಲಸಗಳನ್ನು ಮುಗಿಸಿದ್ದರು. ಗುಜ್ಜಾಡಿಯ ತವರು ಮನೆಯಲ್ಲೇ ವಾಸ್ತವ್ಯ ಹೂಡಿದ್ದ ವಿಶಾಲ ಅವರು ಜುಲೈ 12 ರಂದು ತುರ್ತಾಗಿ ಫ್ಲಾಟ್ ಗೆ ತೆರಳಿದ್ದರು.
ಸಂಜೆಯಾದರೂ ಮಗಳು ಬಾರದಿರುವುದನ್ನು ಗಮನಿಸಿದ ಪೋಷಕರು ಹುಡುಕಿಕೊಂಡು ಪ್ಲ್ಯಾಟ್ ಬಂದಿದ್ದಾರೆ. ಈ ವೇಳೆ ವಿಶಾಲ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಾಗ, ಅದ್ಯಾಕೆ ತುರ್ತಾಗಿ ಅವರು ಪ್ಲ್ಯಾಟ್ ಗೆ ದೌಡಾಯಿಸಿದ್ದಾರೆ ಅನ್ನುವುದೇ ಯಕ್ಷ ಪ್ರಶ್ನೆಯಾಗಿತ್ತು. ಹೀಗಾಗಿ ಗೊತ್ತಿರುವವರ ಕೈವಾಡ ಸ್ಪಷ್ಟವಾಗಿತ್ತು. ಜೊತೆಗೆ ವಿಶಾಲ ಅವರು ಓಡಾಡಿದ ಆಟೋ ಡ್ರೈವರ್ ನನ್ನು ವಿಚಾರಿಸಿದಾಗ ಗಂಡನ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದರು ಅನ್ನುವುದು ಗೊತ್ತಾಗಿದೆ. ಹೀಗಾಗಿ ಮೊಬೈಲ್ ಕರೆಗಳ ಬೆನ್ನು ಹತ್ತಿದಾಗ ಗಂಡನ ಮೇಲೆಯೇ ಅನುಮಾನ ಹುಟ್ಟಿಸುವ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿದೆ.
ಇದಾದ ಬಳಿಕ ರಾಮಕೃಷ್ಣ ಅವರ ಮೊಬೈಲ್ ಜಾಡು ಹಿಡಿದಾಗ, ಅಪರಿಚಿತರ ನಂಬರ್ ಗಳಿಗೆ ಕರೆ ಹೋಗಿರುವುದು ಗೊತ್ತಾಗಿದೆ. ಅವೆಲ್ಲವೂ ಉತ್ತರ ಪ್ರದೇಶದ ಕ್ರಿಮಿನಲ್ ಗಳ ನಂಬರ್ ಗಳಾಗಿತ್ತು. ಹೀಗಾಗಿ ರಾಮಕೃಷ್ಣನನ್ನು ಕರೆ ತಂದು ಪೊಲೀಸರ ಶೈಲಿಯಲ್ಲೇ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಮಾಹಿತಿಗಳ ಪ್ರಕಾರ ಕಳೆದ ಮಾರ್ಚ್ ನಿಂದಲೇ ಕೊಲೆಗೆ ಸಿದ್ದತೆ ನಡೆಸಲಾಗಿತ್ತು. ಮಾರ್ಚ್ ತಿಂಗಳಲ್ಲೇ ತನ್ನ ಸ್ನೇಹಿತರೆಂದು ರಾಮಕೃಷ್ಣ ಸುಪಾರಿ ಕಿಲ್ಲರ್ ಗಳನ್ನು ಪತ್ನಿಗೆ ಪರಿಚಯಿಸಿದ್ದ. ಜುಲೈ 12 ರಂದು ಅದ್ಯಾವುದೋ ನೆಪ ಹೇಳಿ ಪತ್ನಿಯನ್ನು ಪ್ಲ್ಯಾಟ್ ಗೆ ಕರೆಸಿಕೊಂಡು, ಸುಪಾರಿ ಕಿಲ್ಲರ್ ಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಪರಿಚಿತರೇ ಬಂದಿರುವ ಕಾರಣ ವಿಶಾಲ ಅವರು ಬಾಗಿಲು ತೆರೆದಿರುವ ಸಾಧ್ಯತೆಗಳಿದ್ದು , ಈ ವೇಳೆ ಕೊಲೆ ನಡೆದಿದೆಯಂತೆ.
Discussion about this post