ಉಡುಪಿ : ಖಾಸಗಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬದಲಾಯಿಸಲು ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಗಳನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಎಸಿಬಿ ವಶಕ್ಕೆ ಪಡೆದ ಅಧಿಕಾರಿಗಳನ್ನು ಪ್ರಾಧಿಕಾರ ಇಂಜಿನಿಯರ್ ಗುರುಪ್ರಸಾದ್ ಹಾಗೂ ಅಧಿಕಾರಿಗಳಾದ ನಯಿಮಾ ಸಯೀದ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.
ನಗರದ ಆದಿ ಉಡುಪಿಯಲ್ಲಿರುವ ಜಮೀನೊಂದರ ಮಾಲಕರು ತಮ್ಮ ಜಮೀನನ್ನು ವಾಣಿಜ್ಯ ಬಳಕೆ ಸಲುವಾಗಿ ಪರಿವರ್ತಿಸಿಕೊಡುವಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಲಂಚಕೋರ ಅಧಿಕಾರಿಗಳು ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಎರಡೂವರೆ ಲಕ್ಷ ರೂಪಾಯಿಗೆ ಡೀಲ್ ಕುದುರಿತ್ತು.
ಅಧಿಕಾರಿಗಳ ಲಂಚದಾಸೆಯ ಕುರಿತಂತೆ ಅರ್ಜಿದಾರರು ಎಸಿಬಿಯ ಮೆಟ್ಟಿಲು ಹತ್ತಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡ ಅಧಿಕಾರಿಗಳು ಗುರುವಾರ ಪ್ರಾಧಿಕಾರದ ಇಂಜಿನಿಯರ್ ಲಂಚ ಪಡೆಯೋ ವೇಳೆ ದಾಳಿ ಮಾಡಿ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಗೇ ನೋಡಿದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಯಾವತ್ತೋ ದಾಳಿಯಾಗಬೇಕಾಗಿತ್ತು. ಈ ಪ್ರಾಧಿಕಾರದಲ್ಲಿ ಲಂಚವಿಲ್ಲದೆ ಕೆಲಸವಾಗೋದಿಲ್ಲ ಅನ್ನೋ ದೂರನ್ನು ಸಾವರ್ಜನಿಕರು ಈ ಹಿಂದೆಯೇ ನೀಡಿದ್ದರಂತೆ.
Discussion about this post