ಚಿಕ್ಕಬಳ್ಳಾಪುರ : ಇತ್ತೀಚಿನ ದಿನಗಳಲ್ಲಿ ಅದ್ಯಾವ ಕಾರಣಕ್ಕೆ ಕೊಲೆಗಳು ನಡೆಯುತ್ತವೆ ಅನ್ನುವುದೇ ಗೊತ್ತಿರುವುದಿಲ್ಲ. ಕೆಲವೊಂದು ಕೊಲೆಗಳು 10 20 ರೂಪಾಯಿಗಾಗಿ ನಡೆದ್ರೆ, ಮತ್ತೆ ಕೆಲವರಿಗೆ ತಾವ್ಯಾಕೆ ಕೊಲೆ ಮಾಡಿದೆವು ಅನ್ನುವುದೇ ಗೊತ್ತಿರುವುದಿಲ್ಲ.
ಚಿಕ್ಕಬಳ್ಳಾಪುರದಲ್ಲೂ ಹೀಗೆ ಆಗಿದೆ. ಮದ್ಯಪಾನಕ್ಕಾಗಿ ಸೇರಿದ ಗೆಳೆಯರ ಕೂಟ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದೆ. ಇಲ್ಲಿನ ಸೀಗೆಹಳ್ಳಿ ಗ್ರಾಮದ ಮೋಹನ್, ಪ್ರಭಾಕರ್, ಸುಮನ್, ನಂದನ್ ಎಂಬ ಆಪ್ತ ಸ್ನೇಹಿತರು ಮದ್ಯಪಾನ ಗೋಷ್ಟಿಗಾಗಿ ಪಕ್ಕದ ಗ್ರಾಮವಾದ ಗೆಜ್ಜೆಗಾನಹಳ್ಳಿಯ ನೀಲಗಿರಿ ತೋಪಿಗೆ ಹೋಗಿದ್ದಾರೆ.
ಕಂಠಪೂರ್ತಿ ಕುಡಿದ ನಂತ್ರ ಅದ್ಯಾವುದೋ ಕಾರಣಕ್ಕೆ ಚಡ್ಡಿದೋಸ್ತಿಗಳ ನಡುವೆ ಕಿತ್ತಾಟ ಪ್ರಾರಂಭವಾಗಿದೆ. ಈ ವೇಳೆ ಜಗಳ ಸ್ನೇಹಿತನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಕುಡಿದ ಮತ್ತಿನಲ್ಲಿ ಮೋಹನ್ ನ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಪರಾರಿಯಾಗಿದ್ದಾರೆ.
ಯುವಕನ ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಢ್ಲ ಘಟ್ಟ ಪೊಲೀಸರು ಧಾವಿಸಿದ್ದು, ಶಿಢ್ಲ ಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ವಿಚಾರಣೆ ಸಂದರ್ಭದಲ್ಲಿ ಮೋಹನ್ ಸಂಬಂಧಿ ಮನು ಎಂಬಾತ ಈ ಕೊಲೆಗೆ ಪ್ರಭಾಕರ್ ಕಾರಣ ಎಂದು ಬಾಯಿ ಬಿಟ್ಟಿದ್ದಾನೆ. ಕೆಲ ದಿನಗಳ ಹಿಂದೆ ಪ್ರಭಾಕರ್ ನನ್ನ ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದಾನೆ ಎಂದು ಮನು ಬಳಿ ಮೋಹನ್ ಹೇಳಿದ್ದನಂತೆ. ಆದರೆ ಎಣ್ಣೆ ಹೊಡೆದಾಗ ಒಂದು ರೀತಿ ಎಣ್ಣೆ ಇಳಿದಾಗ ಮತ್ತೊಂದು ರೀತಿ ನೀವು ಇರ್ತೀರಿ ಅಂತಾ ಪ್ರಭಾಕರ್ ತಮಾಷೆ ಮಾಡಿದ್ದರಂತೆ.
Discussion about this post