ಯೂ ಟ್ಯೂಬ್ ಹೆಸರಿನಲ್ಲಿ ಇದೀಗ ದಂಧೆಗಳು ( Fake journalists) ಶುರುವಾಗಿದೆ. ಲೋಗೋ, ಐಡಿ ಕಾರ್ಡ್ ದರ್ಬಾರ್ ನೋಡಿದ್ರೆ ಅಸಲಿ ಮಂದಿ ಗಾಬರಿಯಾಗಬೇಕು
ರಾಯಚೂರು : ಬೆದರಿಸಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ ಆರು ಜನ ನಕಲಿ ಪತ್ರಕರ್ತರನ್ನ ( Fake journalists ) ಜಿಲ್ಲಾ ಪೊಲೀಸರು ಬಂಧಿಸಿದ ಘಟನೆ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ. ಬಂಧಿತರನ್ನು ಬೆಂಗಳೂರು ಮೂಲದ ರಾಜು ಬಿ, ನಾಗರಾಜ ಸಿ, ಪ್ರದೀಪಗೌಡ, ಅರ್ಪಿತ, ಮಹಾದೇವಿ, ಮೆಗಾ ಎಸ್ ಎಂದು ಗುರುತಿಸಲಾಗಿದೆ.
ಬಂಧಿತ ನಕಲಿ ಪತ್ರಕರ್ತರಲ್ಲಿ ಮೂವರು ಮಹಿಳೆ ಹಾಗೂ ಮೂವರು ಪುರುಷರಾಗಿದ್ದು, ಆರು ಮಂದಿಯು ಕೂಡ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದರು. ಯೂಟ್ಯೂಬ್ ಚಾನಲ್ ಹೆಸರು ಹೇಳಿಳಿಕೊಂಡು ಸ್ಥಳೀಯ ಅಕ್ಕಿ ವ್ಯಾಪಾರಿ ವೀರೇಶ್ ಅನ್ನುವವರ ಅಂಗಡಿಗೆ ಕ್ಯಾಮೆರಾ ಮತ್ತು ಲೋಗೋ ಹಿಡಿದು ನುಗ್ಗಿದ ಆರೋಪಿಗಳು, ನೀವು ಅಕ್ರಮವಾಗಿ ಪಡಿತರ ಆಹಾರ ಧಾನ್ಯದ ಅಕ್ಕಿ ಮಾರಾಟ ಮಾಡುತಿದ್ದೀರಿ, ನಿಮ್ಮ ಬಗ್ಗೆ ಸುದ್ದಿವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ : Snake Lokesh : 50 ಸಾವಿರ ಹಾವು ರಕ್ಷಿಸಿದ್ದ ಸ್ನೇಕ್ ಲೋಕೇಶ್ ಹಾವು ಕಚ್ಚಿ ಸಾವು
ಸುದ್ದಿ ಪ್ರಸಾರ ಮಾಡಬಾರದೆಂದರೆ, 5 ಲಕ್ಷ ರೂಪಾಯಿ ಕೊಡಿ, ಇಲ್ಲವಾದಲ್ಲಿ ಸುದ್ದಿ ಪ್ರಸಾರ ಮಾಡುತ್ತೇವೆ ಅಂದಿದ್ದಾರೆ. ಆರೋಪಿಗಳ ವರ್ತನೆ ಗಮನಿಸಿದಾಗ ಇವರು ವಸೂಲಿ ವೀರರು ಅನ್ನುನ ಅನುಮಾನ ಹುಟ್ಟಿದೆ. ಹೀಗಾಗಿ ವೀರೇಶ್ ಪೊಲೀಸರಿಗೆ ಮತ್ತು ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಮುದಗಲ್ ಪೊಲೀಸರು ನಕಲಿ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕ್ಯಾಮೆರಾ, ಐಡಿ ಕಾರ್ಡ್ ಹಾಗೂ ಮಾರುತಿ ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ. ಇದೀಗ ಲಭ್ಯ ಮಾಹಿತಿ ಪ್ರಕಾರ ಇದೇ ವಸೂಲಿಕೋರರ ವಿರುದ್ಧ ನಾಲ್ಕೈದು ಪ್ರಕರಣಗಳು ದಾಖಲಾಗಿವೆಯಂತೆ.
Discussion about this post