ಮುಂಬೈ : ಮಂಗಳೂರು ಮೂಲದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುರೇಶ್ ಪೂಜಾರಿಯನ್ನು ಫಿಲಿಪ್ಪೀನ್ಸ್ ಪೊಲೀಸರು ಬಂಧಿಸಿದ್ದು, ಶೀಘ್ರದಲ್ಲೇ ಫಿಲಿಪ್ಪೀನ್ಸ್ ಸರ್ಕಾರ ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳಿದೆ.
ಕುಖ್ಯಾತ ಗ್ಯಾಂಗ್ ಸ್ಟರ್ ರವಿ ಪೂಜಾರಿ ಜೊತೆ ಸೇರಿ ಅಕ್ರಮ ಕಾರ್ಯ ಎಸಗುತ್ತಿದ್ದ ಸುರೇಶ್ ಪೂಜಾರಿ, ಬಳಿಕ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಮುಂಬೈ ನಲ್ಲಿ ಸುಲಿಗೆ ಕಾರ್ಯ ಪ್ರಾರಂಭಿಸಿದ್ದ. ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಈತನ ಟಾರ್ಗೆಟ್ ಆಗಿತ್ತು.ಹೀಗಾಗಿ ಮಹಾರಾಷ್ಟ್ರ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಈತ ಬೇಕಾಗಿದ್ದಾನೆ.
ಮಹಾರಾಷ್ಟ್ರ ಪೊಲೀಸರು ಯಾವಾಗ ಎಚ್ಚೆತ್ತುಕೊಂಡರೋ, ಸುರೇಶ್ ಪೂಜಾರಿ ನಕಲಿ ದಾಖಲೆಗಳ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ಇದಾದ ಬಳಿಕ ಮಹಾರಾಷ್ಟ್ರ ಪೊಲೀಸರು ಮತ್ತು CBI ಈತನ ಚಲನವಲನದ ಮೇಲೆ ಕಣ್ಣಿಟ್ಟಿತ್ತು.
ಇದೀಗ ಫಿಲಿಪ್ಪೀನ್ಸ್ ನಲ್ಲಿ ಗೂಂಡಾಗಳ ಜೊತೆ ಇದ್ದ ವೇಳೆ ಆಕ್ಟೋಬರ್ 15 ರಂದು ದಾಳಿ ನಡೆದಿದ್ದು, ಸುರೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಪೂಜಾರಿಯನ್ನು ವಶಕ್ಕೆ ಪಡೆಯಲು ಮುಂಬೈ ಪೊಲೀಸರು ಮುಂದಾಗಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ.
Discussion about this post