ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಪೊಲೀಸ್ ಠಾಣೆಗಳು ಕಣ್ಮುಚಿ ಕುಳಿತಿರುವುದು ಹೊಸ ವಿಷಯವೇನಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಗಳ ಬಗ್ಗೆ ಪೊಲೀಸ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅದ್ಯಾಕೆ ಮೀನಾ ಮೇಷ ಎಣಿಸುತ್ತಿದ್ದಾರೋ ಗೊತ್ತಿಲ್ಲ. ಒಂದು ವೇಳೆ ದಂಧೆಯ ಹೆಡೆಮುರಿ ಕಟ್ಟುವ ಮನಸ್ಸು ಮಾಡಿರುತ್ತಿದ್ರೆ ಅನೇಕರ ಜೀವನವಾದರೂ ಉದ್ಧಾರವಾಗಿರುತ್ತಿತ್ತು.
ಆದರೆ ಇದೀಗ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳು ಕೂಡಾ ದಂಧೆಯ ಬಗ್ಗೆ ಕಣ್ಣು ಮುಚ್ಚಿ ಕುಳಿತಿದೆಯೇ ಅನ್ನುವ ಅನುಮಾನ ಕಾಡಲಾರಂಭಿಸಿದೆ. ದಂಧೆಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ದಾಳಿ ಮಾಡಬೇಕಾದ ಪರಿಸ್ಥಿತಿ ಬಂದಿದೆ ಅಂದ್ರೆ ಸ್ಥಳೀಯ ಪೊಲೀಸ್ ಠಾಣೆಗಳೇನು ಮಾಡುತ್ತಿದೆ.
ಇಲ್ಲಿನ ಬೆಂದೋರ್‌ವೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಸಿಸಿಬಿ ಪೊಲೀಸರು ಮಾರ್ಚ್ 1 ಮಂಗಳವಾರ ಭೇದಿಸಿದ್ದು, ದಂಧೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಟ್ಲ ಪಡ್ನೂರಿನ ಕೆಪಿ ಹಮೀದ್ (54), ಆಕಾಶಭವನದ ಅನುಪಮಾ ಶೆಟ್ಟಿ (46), ಸುಬ್ರಹ್ಮಣ್ಯ ಕುಲ್ಕುಂದದ ನಿಶ್ಮಿತಾ (23) ಈಕೆ ಎಕ್ಕೂರಿನಲ್ಲಿ ವಾಸವಾಗಿದ್ದಳು ಅನ್ನಲಾಗಿದೆ.

ಬೆಂದೂರ್‌ವೆಲ್‌ನಲ್ಲಿರುವ ಪಿಇಇಬಿಐ ರೆಸಿಡೆನ್ಸಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆರೋಪಿಗಳಿಂದ ಮಾರುತಿ 800 ಕಾರು, ಐದು ಮೊಬೈಲ್ ಫೋನ್ ಮತ್ತು 50,000 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಗಳಾದ ರಾಜೇಂದ್ರ ಬಿ., ಪ್ರದೀಪ ಟಿ. ಆರ್. ಹಾಗೂ ಸಿಸಿಬಿ ಸಿಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Discussion about this post